ನವದೆಹಲಿ:ಭಾರತದಲ್ಲಿ 1991ರಲ್ಲಿ ಆರ್ಥಿಕ ಉದಾರೀಕರಣ ಆರಂಭಿಸಿದ ಮತ್ತು ಭಾರತೀಯ ಆರ್ಥಿಕತೆಯನ್ನು ಮುಕ್ತಗೊಳಿಸಿದ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ ಸಿಂಗ್ ಅವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಕ್ತಕಂಠದಿಂದ ಶ್ಲಾಘಿಸಿದ ಅಪರೂಪದ ಘಟನೆಗೆ ಸುಪ್ರೀಂಕೋರ್ಟ್ ಸಾಕ್ಷಿಯಾಯಿತು.
ನರಸಿಂಹರಾವ್ ಸರ್ಕಾರದ ಈ ನಡೆ ದೇಶದಲ್ಲಿ ಲೈಸನ್ಸ್ ರಾಜ್ ಯುಗಾಂತ್ಯಕ್ಕೆ ಕಾರಣವಾಯಿತು ಎಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠದ ಮುಂದೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ರಾವ್ ಮತ್ತು ಸಿಂಗ್ ಆರಂಭಿಸಿದ ಆರ್ಥಿಕ ಸುಧಾರಣೆಗಳು ಕಂಪನಿ ಕಾನೂನು ಹಾಗೂ ಟ್ರೇಡ್ ಪ್ರಾಕ್ಟೀಸ್ ಕಾಯ್ದೆ ಎಂಆರ್ ಟಿಪಿ ಸೇರಿದಂತೆ ಹಲವು ಕಾನೂನುಗಳನ್ನು ಸಡಿಲಿಸಿದವು. ಆ ಬಳಿಕ ಮೂರು ದಶಕಗಳ ಅವಧಿಯಲ್ಲಿ ಬಂದ ಸರ್ಕಾರಗಳಿಗೆ ಕೈಗಾರಿಕಾ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1051ನ್ನು ಬದಲಿಸುವ ಅಗತ್ಯ ಕಂಡುಬರಲಿಲ್ಲ" ಎಂದು ಹೇಳಿದರು.
ಐಡಿಆರ್ ಎ-1951ನ್ನು ನ್ಯಾಯಪೀಠ ಕಟುವಾಗಿ ಟೀಕಿಸಿ, ಇದು ಪ್ರಾಚೀನ ಹಾಗೂ ಲೈಸನ್ಸ್ ರಾಜ್ ಯುಗದ ನಿರ್ಬಂಧಾತ್ಮಕ ನೀತಿಗಳ ಸೂಚಕ ಎಂದು ಹೇಳಿದ ಸಂದರ್ಭದಲ್ಲಿ ಮೆಹ್ತಾ ಈ ಹೇಳಿಕೆ ನೀಡಿದರು.
ಆರ್ಥಿಕ ಸುಧಾರಣೆಯಿಂದ ಬದಲಾವಣೆಯ ಗಾಳಿ ಬೀಸಿದರೂ, ಈ ಮೂಲಕ ವಿವಿಧ ಕೈಗಾರಿಕೆಗಳ ಮೇಲೆ ಕೇಂದ್ರ ಸರ್ಕಾರದ ಮಹತ್ವದ ನಿಯಂತ್ರಣಕ್ಕೆ ಅವಕಾಶ ನೀಡುವ ಐಡಿಆರ್ ಎಯನ್ನು ಯಾರೂ ಮುಟ್ಟಲು ಹೋಗಲಿಲ್ಲ ಎಂದು ಅಭಿಪ್ರಾಯಪಟ್ಟರು.