HEALTH TIPS

ಬಾಬರಿ ಮಸೀದಿ ಧ್ವಂಸ, ಗುಜರಾತ್‌ ಗಲಭೆಗಳ ಪ್ರಸ್ತಾಪಕ್ಕೆ ಕೊಕ್‌

           ವದೆಹಲಿ: ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ, ಗುಜರಾತ್‌ ಗಲಭೆ ವೇಳೆ ಮುಸ್ಲಿಮರ ಹತ್ಯೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಪ್ರಸ್ತಾಪವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ), ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

             11 ಮತ್ತು 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪಠ್ಯಪುಸ್ತಕಗಳಲ್ಲಿನ ಹಲವು ಅಂಶಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

              ಕೆಲ ವಿಷಯಗಳ ಪ‍್ರಸ್ತಾಪ ಕೈಬಿಟ್ಟಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಎನ್‌ಸಿಇಆರ್‌ಟಿ ಅಧಿಕಾರಿಗಳು, ಕೆಲವು ಅಂಶಗಳಿಗೆ ಕತ್ತರಿ ಹಾಕಿರುವುದು ಪಠ್ಯಪುಸ್ತಕಗಳ ಪರಿಷ್ಕರಣೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

                'ನೂತನ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ಪ್ರಕಾರ ನಡೆಸಲಾಗುವ ನೂತನ ಪಠ್ಯಪುಸ್ತಕಗಳ ರಚನೆಗೂ ಈ ಕ್ರಮಕ್ಕೂ ಸಂಬಂಧ ಇಲ್ಲ' ಎಂದೂ ಹೇಳಿದ್ದಾರೆ.

                   'ರಾಜಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ರಾಮ ಜನ್ಮಭೂಮಿ ಚಳವಳಿಗೆ ಸಂಬಂಧಿಸಿದ ಪ್ರಸ್ತಾಪವನ್ನು ಸರಿಪಡಿಸಲಾಗಿದೆ' ಎಂದು ಪಠ್ಯಪುಸ್ತಕಗಳಲ್ಲಿನ ಈ ಬದಲಾವಣೆಗಳಿಗೆ ಸಂಬಂಧಿಸಿ ಎನ್‌ಸಿಇಆರ್‌ಟಿಯ ಪಠ್ಯಕ್ರಮ ರಚನಾ ಸಮಿತಿ ಸಿದ್ಧಪಡಿಸಿರುವ ದಾಖಲೆಯು ಹೇಳುತ್ತದೆ.

                   11ನೇ ತರಗತಿ ಪಠ್ಯಪುಸ್ತಕದಲ್ಲಿರುವ 'ಜಾತ್ಯತೀತತೆ' ಎಂಬ 8ನೇ ಅಧ್ಯಾಯದಲ್ಲಿ, ಈ ಮೊದಲು 'ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು, ಬಹುತೇಕ ಮುಸ್ಲಿಮರನ್ನು ಹತ್ಯೆ ಮಾಡಲಾಯಿತು' ಎಂದಿತ್ತು.

                 ಇದನ್ನು, '2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು' ಎಂದು ಬದಲಾಯಿಸಲಾಗಿದೆ.

               'ಯಾವುದೇ ಗಲಭೆಗಳಲ್ಲಿ, ಯಾವುದೇ ಒಂದು ಸಮುದಾಯ ಬದಲು, ಎಲ್ಲ ಸಮುದಾಯಗಳ ಜನರು ತೊಂದರೆ ಅನುಭವಿಸುತ್ತಾರೆ' ಎಂಬುದೇ ಈ ಬದಲಾವಣೆ ಹಿಂದಿರುವ ತರ್ಕ ಎಂದು ಎನ್‌ಸಿಇಆರ್‌ಟಿ ಹೇಳಿದೆ.

                 ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತ ಪಾಠದಲ್ಲಿ ಈ ಮೊದಲು, 'ಈ ಪ್ರದೇಶವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಳ್ಳಲಾಗಿದೆ. ಪಾಕಿಸ್ತಾನವು ಈ ಪ್ರದೇಶವನ್ನು ಆಜಾದ್‌ ಪಾಕಿಸ್ತಾನ ಎಂಬುದಾಗಿ ಹೇಳುತ್ತದೆ' ಎಂದಿತ್ತು.

                  ಈ ಅಂಶವನ್ನು,'ಭಾರತದ ಈ ಪ್ರದೇಶವನ್ನು ಪಾಕಿಸ್ತಾನ ಕಾನೂನುಬಾಹಿರವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದನ್ನು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ಎನ್ನಲಾಗುತ್ತದೆ' ಎಂದು ಬದಲಾಯಿಸಲಾಗಿದೆ.

                 'ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತಳೆದಿರುವ ಇತ್ತೀಚಿನ ನಿಲುವಿನ ಆಧಾರಕ್ಕೆ ತಕ್ಕಂತೆಯೇ ಈ ಪಾಠದಲ್ಲಿ ಬದಲಾವಣೆ ಮಾಡಲಾಗಿದೆ' ಎಂದು ಎನ್‌ಸಿಇಆರ್‌ಟಿ ಹೇಳಿದೆ.

                  ಮಣಿಪುರ ಕುರಿತ ಪಾಠದಲ್ಲಿ ಈ ಮೊದಲು, 'ಮಣಿಪುರವನ್ನು ಭಾರತದಲ್ಲಿ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ 1949ರ ಸೆಪ್ಟೆಂಬರ್‌ನಲ್ಲಿ ಸಹಿ ಹಾಕಲಾಯಿತು. ಈ ಕುರಿತು ಮಹಾರಾಜನ ಮೇಲೆ ಒತ್ತಡ ಹೇರಿ, ಸಹಿ ಹಾಕುವಂತೆ ಮಾಡುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿತ್ತು. ಈ ಉದ್ದೇಶ ಸಾಧನೆಗಾಗಿ ಮಣಿಪುರದ ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿರಲಿಲ್ಲ. ಇದು ಮಣಿಪುರ ಜನರಲ್ಲಿ ಆಕ್ರೋಶ ಮತ್ತು ತಿರಸ್ಕಾರ ಭಾವನೆ ಮೂಡಲು ಕಾರಣವಾಯಿತು. ಅದರ ಪರಿಣಾಮವನ್ನು ಈಗಲೂ ಕಾಣಬಹುದಾಗಿದೆ' ಎಂದು ಇತ್ತು.

ಈಗ ಈ ಅಂಶವನ್ನು ಪರಿಷ್ಕರಿಸಲಾಗಿದೆ. 'ಮಣಿಪುರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಸಂಬಂಧ 1949ರ ಸೆಪ್ಟೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮಣಿಪುರ ಮಹಾರಾಜನನ್ನು ಮನವೊಲಿಸುವಲ್ಲಿ ಭಾರತ ಸರ್ಕಾರ ಯಶಸ್ವಿಯಾಯಿತು' ಎಂದು ಬದಲಾಯಿಸಲಾಗಿದೆ.

'ಭಾರತದ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು' ಎಂಬ 8ನೇ ಅಧ್ಯಾಯದಲ್ಲಿ ಇದ್ದ 'ಅಯೋಧ್ಯೆಯ ಧ್ವಂಸ' ಎಂಬ ಪ್ರಸ್ತಾಪವನ್ನು ಕೈಬಿಡಲಾಗಿದೆ.

               'ರಾಜಕೀಯ ಸ್ಥಿತ್ಯಂತರದಲ್ಲಿ ರಾಮ ಜನ್ಮಭೂಮಿ ಚಳವಳಿ ಹಾಗೂ ಅಯೋಧ್ಯೆ ಧ್ವಂಸದ ಪಾತ್ರ' ಎಂಬ ಪಾಠವನ್ನು 'ರಾಮ ಜನ್ಮಭೂಮಿ ಚಳವಳಿ ನಡೆದು ಬಂದ ದಾರಿ' ಎಂಬುದಾಗಿ ಬದಲಾಯಿಸಲಾಗಿದೆ.

           ಇದೇ ಪಾಠದಲ್ಲಿದ್ದ ಬಾಬರಿ ಮಸೀದಿ ಹಾಗೂ ಹಿಂದುತ್ವ ರಾಜಕಾರಣ ಎಂಬ ವಿಷಯಗಳನ್ನು ಕೈಬಿಡಲಾಗಿದೆ.

              'ಪ್ರಜಾಸತ್ತಾತ್ಮಕ ಹಕ್ಕುಗಳು' ಎಂಬ 5ನೇ ಅಧ್ಯಾಯದಲ್ಲಿ ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದ ಅಂಶವನ್ನು ಕೈಬಿಡಲಾಗಿದೆ.

               ಮಾಹಿತಿ ನೀಡಿದ್ದ ಎನ್‌ಸಿಇಆರ್‌ಟಿ: ಸಿಬಿಎಸ್‌ಇ 3 ಮತ್ತು 6ನೇ ತರಗತಿಯ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಇತರ ತರಗತಿಗಳ ಪಠ್ಯಪುಸ್ತಕಗಳು ಎನ್‌ಸಿಎಫ್‌ ಪ್ರಕಾರವೇ ಇವೆ ಎಂದು ಎನ್‌ಸಿಇಆರ್‌ಟಿ ಕಳೆದ ವಾರ ಹೇಳಿತ್ತು.

                  ತರಗತಿಗಳು ಆರಂಭವಾಗಿದ್ದರೂ, ಪಠ್ಯಕ್ರಮದಲ್ಲಿ ತಂದಿರುವ ಈ ಬದಲಾವಣೆಗಳನ್ನು ಒಳಗೊಂಡ ಪಠ್ಯಪುಸ್ತಕಗಳು ಇನ್ನಷ್ಟೆ ಮಾರುಕಟ್ಟೆಯಲ್ಲಿ ಲಭ್ಯವಾಗಬೇಕಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries