ಚೆನ್ನೈ: ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ತಮಿಳುನಾಡಿನ ಮಾಜಿ ವಿಶೇಷ ಡಿಜಿಪಿ ರಾಜೇಶ್ ದಾಸ್ ಎಂಬುವವರಿಗೆ ವಿಧಿಸಲಾಗಿರುವ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಮಹಿಳೆಯರು, ಬಾಲಕಿಯರ ಮೇಲಿನ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಶಿಕ್ಷೆ ರದ್ದುಗೊಳಿಸುವಂತೆ ಕೋರಿ ದಾಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಧಂಡಪಾಣಿ ಅವರು ತಿರಸ್ಕರಿಸಿದರು. ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವುದರಿಂದಲೂ ವಿನಾಯತಿ ನೀಡಬೇಕು ಎಂದು ದಾಸ್ ಕೋರಿದ್ದರು. ನ್ಯಾಯಮೂರ್ತಿಗಳು ಅದನ್ನೂ ನಿರಾಕರಿಸಿದರು.
ಮಹಿಳಾ ಐಪಿಎಸ್ ಅಧಿಕಾರಿಗೆ 2021ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ದಾಸ್ ಅವರ ಅಪರಾಧ ಸಾಬೀತುಪಡಿಸಿದ್ದ ವಿಳ್ಳುಪುರಂ ಸ್ಥಳೀಯ ನ್ಯಾಯಾಲಯವು ಅವರಿಗೆ 2023ರ ಜೂನ್‌ನಲ್ಲಿ ಮೂರು ವರ್ಷಗಳ ಕಠಿಣ ಸಜೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅವರು ಕ್ರಿಮಿನಲ್ ಮಿಸೆಲೇನಿಯಸ್ ಅರ್ಜಿ ಸಲ್ಲಿಸಿದ್ದರು.