ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು 'ಸುಳ್ಳಿನ ಪತ್ರ' ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಖಾತರಿಗಳು 'ಸುಳ್ಳುಗಳ ಖಾತರಿಗಳಾಗಿವೆ' ಎಂದು ಟೀಕಿಸಿದ್ದಾರೆ.
ಮೋದಿ ಅವರು, ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ ಹಾಗೂ ಹಣದುಬ್ಬರ ನಿಯಂತ್ರಣ ಸೇರಿದಂತೆ, ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾರಾಗಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿರುವ ಅವರು, ದೇಶದ ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಅನುಕೂಲವಾಗುವಂತಹ ಯಾವುದೇ ದೊಡ್ಡ ಕೆಲಸವನ್ನು ಮೋದಿ ತಮ್ಮ ಅವಧಿಯಲ್ಲಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಮೋದಿ ಅವರು ಬಿಜೆಪಿಯ ಲೋಕಸಭೆ ಪ್ರಣಾಳಿಕೆಯನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು (ಭಾನುವಾರ) ಬಿಡುಗಡೆ ಮಾಡಿದ್ದಾರೆ. ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಆದ್ಯತೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಖರ್ಗೆ, ಯುವಕರು ಉದ್ಯೋಗಕ್ಕಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಣದುಬ್ಬರದಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ತತ್ತರಿಸಿದ್ದಾರೆ. ಆದರೆ, ಈ ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಯಾವ ಉಲ್ಲೇಖವೂ ಇಲ್ಲ ಎಂದು ಗುಡುಗಿದ್ದಾರೆ.
ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಮತ್ತು ಹಣದುಬ್ಬರವನ್ನು ಹೆಚ್ಚಿಸಿರುವುದೇ ಮೋದಿ ಸಾಧನೆ ಎಂದು ಚಾಟಿ ಬೀಸಿದ್ದಾರೆ.
'ಬಿಜೆಪಿ ಈ ಹಿಂದೆ ನೀಡಿದ್ದ ಗ್ಯಾರಂಟಿಗಳಿಗೆ ಯಾವ ಹೊಣೆಗಾರಿಕೆಯೂ ಇಲ್ಲ. ಅವರ ಗ್ಯಾರಂಟಿಗಳೆಲ್ಲ ಕೇವಲ ಮೋಡಿ ಮಾತುಗಳಾಗಿವೆ. ಮೋದಿಯ ಗ್ಯಾರಂಟಿಯು 'ಸುಳ್ಳುಗಳ ಗ್ಯಾರಂಟಿ'ಯಲ್ಲದೆ ಬೇರೇನೂ ಅಲ್ಲ' ಎಂದು ಕುಟುಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಗೆಲ್ಲಲಿದೆ, ನ್ಯಾಯದ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ, ಬಿಜೆಪಿ ಹಾಗೂ ಮೋದಿ ಅವರಿಗೆ 14 ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರತಿ ವರ್ಷ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹಾಗೂ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ನೀಡಿದ್ದ ಭರವಸೆಗಳು ಏನಾದವು? ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಹಾಗೂ ದೇಶದ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಹೇಳಿದ್ದು ಏನಾಯಿತು? ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲಿನ ಅಪರಾಧ ಕೃತ್ಯಗಳು ಕ್ರಮವಾಗಿ ಶೇ 46 ಹಾಗೂ ಶೇ 48ರಷ್ಟು ಏರಿಕೆಯಾಗಿರುವುದೇಕೆ? ಮಹಿಳಾ ಮೀಸಲಾತಿ ಮತ್ತು ಅವರ ಮೇಲಿನ ದೌರ್ಜನ್ಯ ತಡೆ ಬಗ್ಗೆ ಆಡಿದ್ದ ಮಾತುಗಳು ಏನಾದವು? 100 ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣ ಎಲ್ಲಿಗೆ ಬಂತು? 2020ರ ವೇಳೆಗೆ ಗಂಗಾ ನದಿ ಸ್ವಚ್ಛವಾಯಿತೇ? 2022ರ ಹೊತ್ತಿಗೆ ಪ್ರತಿ ಕುಟುಂಬಕ್ಕೂ ಮನೆ, 24x7 ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದಿರಿ. ಅದೇ ವೇಳೆಗೆ ದೇಶದ ಜಿಡಿಪಿ ಗಾತ್ರವು ₹ 415 ಲಕ್ಷ ಕೋಟಿಗೆ (5 ಟ್ರಿಲಿಯನ್ ಡಾಲರ್‌ಗೆ) ತಲುಪಲಿದೆ ಎಂದು ಹಾಗೂ 40 ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದಾಗಿ ವಿಶ್ವಾಸ ನೀಡಿದ್ದಿರಿ. ಇವೆನ್ನೆಲ್ಲ ಈಡೇರಿಸಿದ್ದೀರಾ? ಬುಲೆಟ್ ರೈಲಿಗೆ ಎಲ್ಲಿಗೆ ಬಂತು? ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದಿದ್ದಾರೆ.