ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸ್ ಇಲಾಖೆಯ ವೆಬ್ ಸೈಟ್ ಗಳನ್ನೇ ಖತರ್ನಾಕ್ ಹ್ಯಾಕರ್ ಗಳು ಹ್ಯಾಕ್ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ.
ದೆಹಲಿ ಪೊಲೀಸ್ ಮತ್ತು ದೆಹಲಿ ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ಗಳನ್ನು ಹ್ಯಾಕರ್‌ಗಳ ಗುಂಪು ಹ್ಯಾಕ್ ಮಾಡಿ ಅಕ್ರಮ ಪ್ರವೇಶ ಪಡೆದಿದೆ. ಈ ಮಾಹಿತಿ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ದೆಹಲಿ ಪೊಲೀಸರು ದತ್ತಾಂಶ ರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಹ್ಯಾಕರ್ ಗಳ ಕುರಿತು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, KillSec ಎಂಬ ಹ್ಯಾಕರ್‌ಗಳ ಗುಂಪು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದು, ಅದರ ಮೂಲಕ ದೆಹಲಿ ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ಗೆ ಪ್ರವೇಶವನ್ನು ಪಡೆದು ಹ್ಯಾಕ್ ಮಾಡಿವೆ. ಅಲ್ಲದೆ ವಿವಿಧ ಪ್ರಕರಣಗಳಲ್ಲಿ ವ್ಯಕ್ತಿಗಳಿಗೆ ನೀಡಲಾದ ಚಲನ್‌ಗಳ ಸ್ಥಿತಿಯನ್ನು "ಪಾವತಿಸಿದ" ಸ್ಥಿತಿಗೆ ಬದಲಾಯಿಸಲು ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ ಪಾವತಿ ಮಾಹಿತಿ ನೀಡುವಂತೆ ಕೋರಿದ ಹ್ಯಾಕರ್ ಗಳು!
ಇನ್ನೂ ಅಚ್ಚರಿ ಎಂದರೆ ವೆಬ್ ಸೈಟ್ ಹ್ಯಾಕ್ ಮಾಡಿದ್ದು ಮಾತ್ರವಲ್ಲದೇ ಯಾರು ಯಾರು ದಂಡ ಪಾವತಿಸಬೇಕೋ ಅವರು ತಮ್ಮ ತಮ್ಮ ಚಲನ್ ಗಳ ಮಾಹಿತಿ ನೀಡಿದರೆ ಅದನ್ನು "ಪಾವತಿಸಿದ" ಸ್ಥಿತಿಗೆ ಬದಲಾಯಿಸಲಾಗುತ್ತದೆ ಎಂದು ಹ್ಯಾಕರ್ ಗಳ ತಂಡ ಓಪನ್ ಆಫರ್ ಕೂಡ ನೀಡಿದೆ. ಮತ್ತೊಂದು ಸಂದೇಶದಲ್ಲಿ, ಹ್ಯಾಕರ್ ಗಳ ಗುಂಪು ದೆಹಲಿ ಪೊಲೀಸ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ, ಫೋಟೋಗಳನ್ನು ಹೊರತು ಪಡಿಸಿ ಎಲ್ಲಾ ಡೇಟಾವನ್ನು ಕದ್ದಿರುವುದಾಗಿ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ ದೆಹಲಿ ಟ್ರಾಫಿಕ್ ಪೋಲೀಸ್ ವೆಬ್‌ಸೈಟ್ ಅನ್ನು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ನಿರ್ವಹಣೆ ಮಾಡುತ್ತದೆ. ಈ ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರವು ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅಂತೆಯೇ ವೆಬ್ ಸೈಟ್ ದತ್ತಾಂಶಗಳ ಪರೀಶಲನೆ ಕಾರ್ಯ ಪ್ರಗತಿಯಲ್ಲಿದ್ದು, ದತ್ತಾಂಶಗಳನ್ನು ಹ್ಯಾಕರ್ ಗಳು ಕದ್ದಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತವಾಗಿ ನಿರ್ಧರಿಸಲು ಈಗವೇ ಸಾಧ್ಯವಿಲ್ಲ. ಏಕೆಂದರೆ ವಿಷಯವು ಇನ್ನೂ ತನಿಖೆಯ ಆರಂಭಿಕ ಹಂತದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.