ಒಡಿಶಾ: ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ನುಗ್ಗಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಬ್ರಿಟಿಷ್ ಪ್ರಜೆಯನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ದಕ್ಷಿಣ ಲಂಡನ್‌ನ ವಾಂಡ್ಸ್‌ವರ್ತ್‌ನ ಥಾಮಸ್ ಕ್ರೇಗ್ ಶೆಲ್ಡನ್ ಎಂದು ಗುರುತಿಸಲಾದ ವಿದೇಶಿ ಪ್ರವಾಸಿಗ ಶನಿವಾರ 12 ನೇ ಶತಮಾನದ ದೇಗುಲವನ್ನು ಅನಧಿಕೃತವಾಗಿ ಪ್ರವೇಶಿಸಿದ್ದಾರೆ. ನಂತರ ಅವರನ್ನು ತಡೆದ ಪೊಲೀಸರು
ಹಿಂದೂಯೇತರರಿಗೆ ದೇವಾಲಯದೊಳಗೆ ಪ್ರವೇಶವನ್ನು ಅನುಮತಿಸದ ಕಾರಣ ದೇವಾಲಯದ ಆವರಣದಿಂದ ಹೊರಹೋಗುವಂತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಥಾಮಸ್ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
"ವಿದೇಶಿ ಪ್ರಜೆಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪುರಿಯ ನಗರ ಡಿಎಸ್ಪಿ ಪ್ರಶಾಂತ್ ಕುಮಾರ್ ಸಾಹು ಹೇಳಿದ್ದಾರೆ. ಮಾರ್ಚ್ 23 ರಂದು ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ಪೋಲೆಂಡ್‌ನ ಮಹಿಳೆಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ ಕೇವಲ ಒಂದು ವಾರದ ನಂತರ ಈ ಘಟನೆ ನಡೆದಿದೆ.