ಮಂಜೇಶ್ವರ : ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಬುಧವಾರ ಮುಸ್ಲಿಂ ಸಮುದಾಯದವರು ಸಂಭ್ರಮ, ಸಡಗರದಿಂದ ಆಚರಿಸಿದರು.
ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ, ಕುಂಬಳೆ, ಬದಿಯಡ್ಕ, ಪೆರ್ಲ, ಮುಳ್ಳೇರಿಯ ಮೊದಲಾದೆಡೆಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಕುಂಜತ್ತೂರು ಮಸ್ಜಿದುನ್ನೂರು ಮಸೀದಿ ಉಸ್ತಾದ್ ನೌಫಲ್ ಒಟ್ಟುಮಾಲ್, ದಾರುಸ್ಸಲಾಂ ಸಲಪಿ,ü ಮಸೀದಿ ಈದ್ಗಾದಲ್ಲಿ ಮೊಹಮ್ಮದಲಿ ಸಲಫಿ, ಉದ್ಯಾವರ ಸಾವಿರ ಜಮಾಹತ್ ಮಸೀದಿಯಲ್ಲಿ ಖತೀಬರಾದ ಅಬ್ದುಲ್ ಕರೀಂ ಧಾರಿಮಿ, ಈದ್ಗಾ ಕಡಂಬಾರಿನಲ್ಲಿ ಉಸ್ತಾದ್ ನೂರುಲ್ ಹಸನ್ ಮದೀನಿ, ಪೊಸೋಟು ಜುಮಾ ಮಸೀದಿಯಲ್ಲಿ ಸಬೀರ್ ಫೈಝಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.