ನವದೆಹಲಿ:ಇಂದು (ಏ.14) ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗ್‌ದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡು ದೇಶದ ಹಲವು ನಾಯಕರು ಜನತೆಗೆ ಶುಭಾಶಯ ತಿಳಿಸಿದ್ದಾರೆ.
1891ರಲ್ಲಿ ಮಹಾರಾಷ್ಟ್ರದ ಮಾಹೋದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ತತ್ವ, ಆದರ್ಶಗಳು ದಮನಿತರಿಂದ ಹಿಡಿದು ಸಮ ಸಮಾಜದ ಚಿಂತಕರಿಗೆ ಸ್ಫೂರ್ತಿದಾಯಕವಾಗಿವೆ.
ನಮ್ಮ ಸಂವಿಧಾನದ ಶಿಲ್ಪಿ, ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಎಲ್ಲ ನಾಗರಿಕರಿಗೆ ಆತ್ಮೀಯ ಶುಭಾಶಯಗಳನ್ನು ಕೋರುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರದ ಜೊತೆ ತಮ್ಮ ಸಂದೇಶ ಪತ್ರವನ್ನು ಹಂಚಿಕೊಂಡಿದ್ದಾರೆ.
ಅಂಬೇಡ್ಕರ್ ಅವರ ಜಯಂತಿಯಂದು ಅವರಿಗೆ ವಿನಮ್ರ ನಮನಗಳು. ಬಾಬಾಸಾಹೇಬರು ಭಾರತೀಯ ಸಂವಿಧಾನದ ಶಿಲ್ಪಿ ಮಾತ್ರವಲ್ಲದೇ ಸಾಮಾಜಿಕ ನ್ಯಾಯದ ಪ್ರತಿಪಾದಕರೂ ಆಗಿದ್ದರು. ನಾಗರಿಕ ಸ್ವಾತಂತ್ರ್ಯ, ಲಿಂಗ ಸಮಾನತೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಸಾಂವಿಧಾನಿಕ ಚೌಕಟ್ಟಿನ ಮೂಲಕ ಉತ್ತೇಜನ ನೀಡಿದ್ದರು. ಸಾಮಾಜಿಕ ಬದಲಾವಣೆ ಹಾಗೂ ಸಮಾನತಾವಾದಿ ಭಾರತ ನಿರ್ಮಾಣದ ಪ್ರವರ್ತಕರಾಗಿದ್ದರು ಎಂದು ಉಪರಾಷ್ಟ್ರಪತಿ ಜಗ್‌ದೀಪ್ ಧನಕರ್ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಜೈ ಭೀಮ್! ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂವಿಧಾನದ ಶಿಲ್ಪಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಹೋರಾಟ ಅನನ್ಯವಾದುದು. ಅಂಬೇಡ್ಕರರ ಜನ್ಮ ದಿನಾಚರಣೆಯಂದು, ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯದ ಅವರ ವಿಚಾರಗಳಿಗೆ ನಮ್ಮ ಅಚಲ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.