ವಿಶ್ವಸಂಸ್ಥೆ: 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನ್ಯಾಯಯುತ, ಪರಿಣಾಮಕಾರಿ, ಪ್ರಾತಿನಿಧಿಕ, ಜವಾಬ್ದಾರಿಯುತ ಸುಧಾರಣೆ ತರುವ ಏಕೈಕ ಮಾರ್ಗವೆಂದರೆ ಅದರ ಶಾಶ್ವತ ಮತ್ತು ಶಾಶ್ವತವಲ್ಲದ ವರ್ಗಗಳಲ್ಲಿ ಸದಸ್ಯತ್ವವನ್ನು ಹೆಚ್ಚಿಸುವುದೇ ಆಗಿದೆ' ಎಂದು ಭಾರತವು ಮಂಗಳವಾರ ಪ್ರತಿಪಾದಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆಮೂಲಾಗ್ರ ಸುಧಾರಣೆಗೆ ಒತ್ತಾಯಿಸುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡಬೇಕು ಎಂದೂ ಹಕ್ಕು ಪ್ರತಿಪಾದಿಸಿದೆ.
'ಭದ್ರತಾ ಮಂಡಳಿಯ ಸದತ್ಯತ್ವ ವಿಸ್ತರಣೆ ಪರವಾಗಿ ಭಾರತ ಇದೆ. ಅದರ ಸುಧಾರಣೆಯ ನ್ಯಾಯಯುತ ಮಾರ್ಗ ಇದೇ ಆಗಿದೆ' ಎಂದು ರಾಯಭಾರಿ, ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೊಜ್ ಹೇಳಿದ್ದಾರೆ.
ಸೋಮವಾರ ನಡೆದ ಭದ್ರತಾ ಮಂಡಳಿಯ ಅಂತರ ಸರ್ಕಾರ ಸಮಾಲೋಚನೆ (ಐಜಿಎನ್) ಸಮಿತಿಯ ಆರನೇ ಸುತ್ತಿನ ಸಭೆಯಲ್ಲಿ ಅವರು ಈ ಅಭಿಪ್ರಾಯವನ್ನು ಮಂಡಿಸಿದರು.
ಭೌಗೋಳಿಕ ಮತ್ತು ಅಭಿವೃದ್ಧಿ ವೈವಿಧ್ಯವನ್ನು ಸರಿಯಾಗಿ ಬಿಂಬಿಸಲು ಈಗ ಸುಧಾರಣೆ ಆಗಬೇಕಿದೆ. ಅಭಿವೃದ್ಧಿ ಆಗುತ್ತಿರುವ ದೇಶಗಳ ಧ್ವನಿಗೂ ಸೂಕ್ತ ಮಾನ್ಯತೆ ಸಿಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ರುಚಿರಾ ಅವರ ಭಾಷಣದ ತರುವಾಯ ಅಧಿಕಾರಿಯೊಬ್ಬರು ಇಂಡಿಯಾ ಮಿಷನ್‌ನ 'ಎಕ್ಸ್' ಜಾಲತಾಣದಲ್ಲಿ ಅವರ ಭಾಷಣದ ವಿಡಿಯೊ ಮುದ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಭಾರತವು ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡಿದೆ ಎಂದು ಶೀರ್ಷಿಕೆ ನೀಡಲಾಗಿದೆ.