ಎರ್ನಾಕುಳಂ: ಕರುವನ್ನೂರ್ ಕಪ್ಪುಹಣ ಪ್ರಕರಣದಲ್ಲಿ ಸಿಪಿಎಂಗೆ ಇಡಿ ಕುಣಿಕೆ ಬಿಗಿಗೊಳಿಸಿದೆ. ವಿಚಾರಣೆಗೆ ಹಾಜರಾಗಲು ಇಬ್ಬರಿಗೆ ನೋಟೀಸು ನೀಡಲಾಗಿದೆ.
ಮಾಜಿ ಸಂಸದ ಪಿ.ಕೆ.ಬಿಜು ಹಾಗೂ ತ್ರಿಶೂರ್ ಕಾರ್ಪೋರೇಷನ್ ಕೌನ್ಸಿಲರ್ ಪಿ.ಕೆ.ಶಾಜನ್ ಅವರಿಗೆ ನೋಟಿಸ್ ನೀಡಲಾಗಿದೆ. ಸಿಪಿಎಂ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವರ್ಗೀಸ್ ಅವರಿಗೂ ನಿನ್ನೆ ನೋಟಿಸ್ ನೀಡಲಾಗಿತ್ತು.
ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎಂದು ವರದಿಯಾಗಿದೆ. ಬಿಜು ಗುರುವಾರ ಮತ್ತು ಶಾಜನ್ ಶುಕ್ರವಾರ ಹಾಜರಾಗಲು ಸೂಚಿಸಲಾಗಿದೆ. ಮಾಜಿ ಸಂಸದರು ಹಾಜರಾಗುವರೇ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಪ್ರಮುಖ ಆರೋಪಿ ಸತೀಶ್ ಕುಮಾರ್ ಜತೆ ಬಿಜು ಆರ್ಥಿಕ ವ್ಯವಹಾರ ನಡೆಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದು ಕರುವನ್ನೂರಿನಿಂದ ವಂಚನೆಗೊಳಗಾದ ಬಡವರ ಹಣ ಎಂದು ಇಡಿ ಪತ್ತೆ ಮಾಡಿದೆ.
ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನೆ ಕುರಿತು ತನಿಖೆ ನಡೆಸಲು ಸಿಪಿಎಂ ನೇಮಿಸಿದ್ದ ವಿಚಾರಣಾ ಸಮಿತಿಯಲ್ಲಿ ಕೌನ್ಸಿಲರ್ ಹಾಗೂ ಮಾಜಿ ಸಂಸದರು ಸದಸ್ಯರಾಗಿದ್ದರು. ಇದೇ ವೇಳೆ ತನಿಖಾ ವರದಿ ಹಸ್ತಾಂತರಿಸುವ ಇಡಿ ಪ್ರಸ್ತಾವನೆಯನ್ನು ಎಂ.ಎಂ.ವರ್ಗೀಸ್ ತಿರಸ್ಕರಿಸಿದರು.ತನಿಖಾ ತಂಡ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು.