ಮಾನಂತವಾಡಿ: ವಯನಾಡಿನ ತಲಪುಳ ಕಂಬಮಲದಲ್ಲಿ ಮಾವೋವಾದಿಗಳು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆದಿರುವುದು ವರದಿಯಾಗಿದೆ. ಮಂಗಳವಾರ ಬೆಳಗ್ಗೆ ಘರ್ಷಣೆ ನಡೆದಿದೆ.
ತೋಟದ ಕಾರ್ಮಿಕರು ಒಂಬತ್ತು ಬಾರಿ ಗುಂಡೇಟಿನ ಶಬ್ದಗಳನ್ನು ಕೇಳಿದ್ದಾರೆಂದು ವರದಿ ಮಾಡಿದ್ದಾರೆ. ತೆನ್ಪಾರ್ ಮತ್ತು ಅನಕುನ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಕಳೆದ ವಾರ ಸಿಪಿ ಮೊಯಿದ್ದೀನ್ ನೇತೃತ್ವದಲ್ಲಿ ನಾಲ್ವರು ಮಾವೋವಾದಿಗಳು ಕಂಬಮಲ ತಲುಪಿದ್ದು, ಬಳಿಕ ಪೋಲೀಸ್ ಕಣ್ಗಾವಲು ತೀವ್ರಗೊಳಿಸಲಾಗಿತ್ತು. ಕಂಬಮಲ ಸಮೀಪದ ಅರಣ್ಯದಲ್ಲಿ ಗುಂಪು ತಂಗಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಕಳೆದ ಬುಧವಾರ ಬೆಳಗ್ಗೆ 6.10ಕ್ಕೆ ಸಿಪಿ ಮೊಯಿದ್ದೀನ್ ನೇತೃತ್ವದಲ್ಲಿ ನಾಲ್ವರು ಸ್ಥಳಕ್ಕೆ ಆಗಮಿಸಿದ್ದರು. ಇಬ್ಬರ ಕೈಯಲ್ಲೂ ಆಯುಧಗಳಿದ್ದವು. ಪೆರೆಯಾದಲ್ಲಿ ದಾಳಿ ನಡೆದು ತಿಂಗಳ ನಂತರ ಮಾವೋವಾದಿಗಳು ಮತ್ತೆ ಪ್ರತ್ಯಕ್ಷಗೊಂಡಿದ್ದಾರೆ. ಚುನಾವಣೆಯಲ್ಲಿ ಮತ ಹಾಕದಂತೆ ಸ್ಥಳೀಯರಿಗೆ ಮನವಿ ಮಾಡಿದ್ದು, ಮತ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜನರನ್ನು ಬೋಧಿಸಿದ್ದರು. ಆದರೆ ಸ್ಥಳೀಯರು ವಾಗ್ವಾದ ನಡೆಸಿದ ಕಾರಣ ಕಾಡಿಗೆ ವಾಪಸಾಗಿದ್ದರು.
ಕಂಬಮಲದಲ್ಲಿ ನೆಲೆಸಿರುವ ಶ್ರೀಲಂಕಾ ನಿರಾಶ್ರಿತರ ಸಂಕಷ್ಟವನ್ನು ಉಲ್ಲೇಖಿಸಿ ಮಾವೋವಾದಿಗಳು ಅರಣ್ಯ ಅಭಿವೃದ್ಧಿ ನಿಗಮದ ವಿಭಾಗೀಯ ಕಚೇರಿ ಮೇಲೆ ಹಗಲು ದಾಳಿ ನಡೆಸಿದ್ದರು. ಹಲವು ಬಾರಿ ಸಿ.ಪಿ. ಮೊಯಿದ್ದೀನ್ ನೇತೃತ್ವದ ಮಾವೋವಾದಿ ಶಸ್ತ್ರಸಜ್ಜಿತ ಗುಂಪು ಕಂಬಮಲ ತಲುಪಿತ್ತು. ಪೋಲೀಸ್ ಹೆಲಿಕಾಪ್ಟರ್ ನಲ್ಲಿ ಶೋಧ ನಡೆಸಿದರೂ ಮಾವೋವಾದಿಗಳು ಪತ್ತೆಯಾಗಿರಗಿಲ್ಲ.