ಗುರುಗ್ರಾಮ: 18 ತಿಂಗಳ ಒಳಗಿನ ಮಕ್ಕಳಿಗೆ ನೀಡಲಾಗುವ ಸೆರೆಲಾಕ್ ಶಿಶು ಆಹಾರವನ್ನು ಜಾಗತಿಕ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಯೇ ತಯಾರಿಸಲಾಗುತ್ತದೆ. ಆದರೆ, ಸೆರೆಲಾಕ್ ವಿರುದ್ಧ ಮಾಡಲಾದ ಆರೋಪ ದುರದೃಷ್ಟಕರ ಮತ್ತು ಅಸತ್ಯ ಎಂದು ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಅವರು ಸೋಮವಾರ ಹೆಳಿದ್ದಾರೆ.
ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿಶು ಆಹಾರದಲ್ಲಿನ ಸಕ್ಕರೆ ಅಂಶದ ಪ್ರಮಾಣವನ್ನು ನಿರ್ದಿಷ್ಟ ವಯೋಮಾನದ ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ ಮತ್ತು ಅದು ಸಾರ್ವತ್ರಿಕವೂ ಆಗಿದೆ. ಸೆರೆಲಾಕ್‌ನಲ್ಲಿ ನೆಸ್ಲೆ ಇಂಡಿಯಾ ಸೇರಿಸಿದ ಸಕ್ಕರೆ ಅಂಶವು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸೂಚಿಸಿದ ಮಿತಿಗಿಂತಲೂ ತುಂಬಾ ಕಡಿಮೆ ಇದೇ ಎಂದು ಅವರು ಒತ್ತಿ ಹೇಳಿದರು.
'ಈ ಉತ್ಪನ್ನದಲ್ಲಿ ಮಗುವಿಗೆ ಯಾವುದೇ ಅಪಾಯ ಅಥವಾ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವಂತಹ ಅಂಶಗಳು ಇಲ್ಲ. ನೆಸ್ಲೆ ತಯಾರಿಕೆಯ ಶಿಶು ಆಹಾರ ಉತ್ಪನ್ನದಲ್ಲಿ ಇರುವ ಹೆಚ್ಚಿನ ಸಕ್ಕರೆಗಳು ನೈಸರ್ಗಿಕ ಸಕ್ಕರೆಗಳಾಗಿವೆ' ಎಂದು ಅವರು ಹೇಳಿದ್ದಾರೆ.
ಪ್ರತಿ 100 ಗ್ರಾಂ ಶಿಶು ಆಹಾರದಲ್ಲಿ 13.6 ಗ್ರಾಂನಷ್ಟು ಸಕ್ಕರೆ ಸೇರಿಸಲು ಎಫ್‌ಎಸ್‌ಎಸ್‌ಎಐ ಅನುಮತಿಸಿದೆ. ಆದರೆಮ ನೆಸ್ಲೆಯ 100 ಗ್ರಾಂ ಆಹಾರದಲ್ಲಿ ಕೇವಲ 7.1 ಗ್ರಾಂನಷ್ಟು ಮಾತ್ರ ಸಕ್ಕರೆ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾವು ಭಾರತ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಸೇರಿ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿರುವ ತನ್ನ ಶಿಶು ಆಹಾರ ಉತ್ಪನ್ನಗಳಲ್ಲಿ ಹೆಚ್ಚುವರಿಯಾಗಿ ಸಕ್ಕರೆ ಅಂಶ ಸೇರಿಸಿದೆ ಮತ್ತು ಅದು ಅಧಿಕ ಪ್ರಮಾಣದಲ್ಲಿ ಇದೆ ಎಂಬ ಅಂಶ ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಸ್ವಿಸ್ ಮೂಲದ ಸ್ವಯಂಸೇವಾ ಸಂಸ್ಥೆ ಪಬ್ಲಿಕ್ ಐ ಹಾಗೂ ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಯಕ್ಷನ್ ನೆಟ್‌ವರ್ಕ್ (ಐಬಿಎಫ್‌ಎಎನ್) ಈ ತಿಂಗಳ ಆರಂಭದಲ್ಲಿ ಆರೋಪಿಸಿತ್ತು.