ಮುಂಬೈ: ಮುಖೇಶ್ ಅಂಬಾನಿಯವರ ಫೈನಾನ್ಸ್ ಕಂಪನಿಯಾದ ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (Jio Financial Services Ltd) ಷೇರುಗಳ ಮೇಲೆ ಸೋಮವಾರದಂದು ಹೂಡಿಕೆದಾರರು ಗಮನ ಕೇಂದ್ರೀಕರಿಸಿದರು.
ಕಂಪನಿಯ ಷೇರುಗಳ ಬೆಲೆ ಶೇಕಡಾ 4 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಬೆಲೆಯಾದ 385 ರೂ.ತಲುಪಿತು. ಷೇರುಗಳ ಈ ಏರಿಕೆಯ ಹಿಂದಿನ ಕಾರಣವೆಂದರೆ ಮಾರ್ಚ್ ತ್ರೈಮಾಸಿಕದ ಫಲಿತಾಂಶಗಳು.
ವಾಸ್ತವವಾಗಿ, ಮಾರ್ಚ್ 2024 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ನಿವ್ವಳ ಲಾಭವು ಶೇಕಡಾ 6ರಷ್ಟು ಹೆಚ್ಚಾಗಿ 311 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಮುಖ್ಯವಾಗಿ ಕಂಪನಿಯ ಆದಾಯದ ಹೆಚ್ಚಳದಿಂದಾಗಿ ಲಾಭ ಹೆಚ್ಚಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ಬೇರ್ಪಟ್ಟ ಈ ಹಣಕಾಸು ಸೇವಾ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ 294 ಕೋಟಿ ರೂ. ಲಾಭ ಗಳಿಸಿತ್ತು. 2023-24ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 414 ಕೋಟಿ ರೂ.ಗಳಿಂದ 418 ಕೋಟಿ ರೂ. ಏರಿದೆ. ಇದರ ವೆಚ್ಚಗಳು ಸಹ ಮೂರನೇ ತ್ರೈಮಾಸಿಕದಲ್ಲಿ 99 ಕೋಟಿ ರೂ.ಗೆ ಹೋಲಿಸಿದರೆ 103 ಕೋಟಿ ರೂ.ಗೆ ಏರಿದೆ.
ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಸ್ಟಾಕ್ ಮಾರ್ಕೆಟ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭವು 2023-24 ರ ಹಣಕಾಸು ವರ್ಷದಲ್ಲಿ 1,605 ಕೋಟಿ ರೂ.ಗೆ ಬಹುಪಟ್ಟು ಹೆಚ್ಚಾಗಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ 31 ಕೋಟಿ ರೂ. ಇತ್ತು.
ಇತ್ತೀಚೆಗೆ ರಿಲಯನ್ಸ್ ಗ್ರೂಪ್ ಕಂಪನಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಆಸ್ತಿ ನಿರ್ವಹಣೆ ಮತ್ತು ಬ್ರೋಕಿಂಗ್ ವ್ಯವಹಾರವನ್ನು ಸ್ಥಾಪಿಸಲು ಬ್ಲ್ಯಾಕ್‌ರಾಕ್‌ನೊಂದಿಗೆ 50:50 ಜಂಟಿ ಉದ್ಯಮವನ್ನು ಘೋಷಿಸಿದೆ. ಜಿಯೋ ಫೈನಾನ್ಶಿಯಲ್ ಸ್ಟಾಕ್ ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ, ಸಂಪತ್ತು ನಿರ್ವಹಣಾ ಕಂಪನಿಯನ್ನು ಸಂಘಟಿಸಲು ಮತ್ತು ದೇಶದಲ್ಲಿ ಬ್ರೋಕರೇಜ್ ಸಂಸ್ಥೆಯನ್ನು ರಚಿಸುವ ಉದ್ದೇಶಕ್ಕಾಗಿ ಕಂಪನಿ ಮತ್ತು ಬ್ಲ್ಯಾಕ್‌ರಾಕ್ ನಡುವೆ 50:50 ಪಾಲುದಾರಿಕೆ ಜಂಟಿ ಉದ್ಯಮವನ್ನು ರೂಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದೆ.