ಬೀಜಿಂಗ್: ಅರುಣಾಚಲ ಪ್ರದೇಶ ತನ್ನದೆಂದು ಸಾಧಿಸುವ ಚಾಳಿಯನ್ನು ಚೀನಾ ಮುಂದುವರಿಸಿದ್ದು ಅಲ್ಲಿನ 30 ವಿವಿಧ ಪ್ರದೇಶಗಳ ಚೀನಿ ಹೆಸರಿನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡುತ್ತಿದೆ.
2017, 2021 ಹಾಗೂ 2023ರಲ್ಲಿ ಚೀನಾ ಅರುಣಾಚಲ ಪ್ರದೇಶದಲ್ಲಿನ ಪ್ರದೇಶಗಳಿಗೆ ಚೀನಿ ಹೆಸರುಗಳನ್ನು ನಾಮಕರಣ ಮಾಡಿದ್ದ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಅರುಣಾಚಲ ಪ್ರದೇಶವನ್ನು ತನ್ನ ಜಾಂಗನಾನ್ ಪ್ರಾಂತ್ಯ ಎಂದು ಹೇಳಿಕೊಳ್ಳುವ ಚೀನಾ ಅದು ದಕ್ಷಿಣ ಟಿಬೆಟ್‌ನ ತನ್ನ ಒಂದು ಭಾಗ ಎಂದು ಹೇಳಿಕೊಳ್ಳುವುದನ್ನು ಮತ್ತೆ ಮುಂದುವರೆಸಿದೆ.
ಚೀನಾದ ಅಧಿಕೃತ ಸುದ್ದಿ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ಈ ಕುರಿತು ವರದಿ ಮಾಡಿದೆ. ಮೇ 1ರಂದು ಈ ಹೆಸರುಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.
ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಭಾರತ ಸರ್ಕಾರ ನಿರ್ಮಿಸಿರುವ ಸೇಲಾ ಸುರಂಗ ಉದ್ಘಾಟನೆಯಾದ ನಂತರ ಚೀನಾ ಪ್ರತಿಭಟನಾ ರೂಪಕವಾಗಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಸಿಂಗಪುರಕ್ಕೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ಅರುಣಾಚಲ ಪ್ರದೇಶದ ಮೇಲೆ ಪುನಾರಾವರ್ತಿತವಾಗಿ ಹಕ್ಕು ಪ್ರತಿಪಾದಿಸುತ್ತಿರುವ ಚೀನಾದ ನಡೆ ಹಾಸ್ಯಾಸ್ಪದ. ನಮ್ಮ ಗಡಿ ರಾಜ್ಯ ಅರುಣಾಚಲ ಪ್ರದೇಶ ನೈಸರ್ಗಿಕವಾಗಿಯೇ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದರು.
ಲೈನ್ ಆಫ್ ಕಂಟ್ರೋಲ್ ಅನ್ನು (ಗಡಿ ನಿಯಂತ್ರಣ ರೇಖೆ) ಯಾರೂ ಮೀರಬಾರದು ಎಂದು ಅವರು ಪ್ರತಿಭಟನೆ ದಾಖಲಿಸಿದ್ದಾರೆ.