ಡಬ್ಲಿನ್: ಐರ್ಲೆಂಡ್ ದೇಶದ ನೂತನ ಪ್ರಧಾನಿಯಾಗಿ ಸೈಮನ್ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
37 ವರ್ಷದ ಹ್ಯಾರಿಸ್ ಐರ್ಲೆಂಡ್ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಲಿಯೊ ವರಾಡ್ಕರ್ ಇತ್ತೀಚೆಗೆ ದಿಢೀರ್ ಪದತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೂತನ ಪ್ರಧಾನಿ ಆಯ್ಕೆಗೆ ಸಂಸತ್ತಿನಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 88-69 ಮತಗಳಿಂದ ಸೈಮನ್ ಆಯ್ಕೆಯಾಗಿದ್ದಾರೆ.
ಆರೋಗ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿ ಕೆಲಸ ಮಾಡಿರುವ ಸೈಮನ್, ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದರು. ಕಳೆದ ತಿಂಗಳು ಸೆಂಟರ್-ರೈಟ್ ಫೈನ್ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ದೇಶ ಸೇವೆಗೆ ನನ್ನನ್ನು ಆಯ್ಕೆ ಮಾಡಿರುವ ಈ ನಿರ್ಧಾರ ಒಪ್ಪಿಕೊಳ್ಳುತ್ತೇನೆ ಎಂದು ಸೈಮನ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.
'ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಗೌರವಿಸಲು ಬೇಕಾದ ಎಲ್ಲವನ್ನೂ ಮಾಡಲು ನಾನು ಬದ್ಧನಾಗಿದ್ದೇನೆ'ಎಂದು ಅವರು ಸಂಸತ್ ಸದಸ್ಯರನ್ನು ಉದ್ದೇಶಿಸಿ ಹೇಳಿದ್ದಾರೆ.
ತನ್ನ ಉಮೇದುವಾರಿಕೆಯನ್ನು ಬೆಂಬಲಿಸಿದ ಜನರನ್ನು ಉದ್ದೇಶಿಸಿ, ಹ್ಯಾರಿಸ್ ಅವರು ಏಕತೆ, ಸಹಯೋಗ ಮತ್ತು ಪರಸ್ಪರ ಗೌರವದ ಉತ್ಸಾಹದಲ್ಲಿ ಮುನ್ನಡೆಯಲು ಯೋಜಿಸಿದ್ದೇನೆ ಎಂದು ತಿಳಿಸಿದ್ದಾರೆ.