ವಾಷಿಂಗ್ಟನ್: ಅಮೆರಿಕದ ಅರಿಜೋನಾದ ಲೇಕ್ ಪ್ಲೆಸೆಂಟ್ ಬಳಿ ಟ್ರಾಫಿಕ್ ವೇಳೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು 19 ವರ್ಷದ ನಿವೇಶ್ ಮುಕ್ಕಾ ಮತ್ತು 19 ವರ್ಷದ ಗೌತಮ್ ಪಾರ್ಸಿ ಎಂದು ಗುರುತಿಸಲಾಗಿದೆ.
ಏಪ್ರಿಲ್ 20ರಂದು ಸಂಜೆ 6:18ರ ಸುಮಾರಿಗೆ ದುರಂತ ಸಂಭವಿಸಿದೆ. ರಾಜ್ಯ ಹೆದ್ದಾರಿ 74ರ ಉತ್ತರಕ್ಕೆ ಕ್ಯಾಸಲ್ ಹಾಟ್ ಸ್ಪ್ರಿಂಗ್ಸ್ ರಸ್ತೆಯಲ್ಲಿ ಬಿಳಿ ಬಣ್ಣದ ಕಿಯಾ ಫೋರ್ಟೆ ಮತ್ತು ಕೆಂಪು ಬಣ್ಣದ ಫೋರ್ಡ್ ಎಫ್150 ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪಿಯೋರಿಯಾ ಪೋಲೀಸರು ತಿಳಿಸಿದ್ಧಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಎಫ್150 ಕಾರು ದಕ್ಷಿಣದ ಕಡೆಗೆ ಮತ್ತು ಕಿಯಾ ಫೋರ್ಟೆ ಉತ್ತರದ ಕಡೆಗೆ ತೆರಳುತ್ತಿತ್ತು. ಅಪಘಾತ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್150 ಕಾರಿನಲ್ಲಿದ್ದ ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಯಾ ಫೋರ್ಟೆ ವಾಹನದಲ್ಲಿದ್ದ ಮೂವರ ಪೈಕಿ ಗಂಭೀರವಾಗಿ ಗಾಯಗೊಂಡ ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.