ಬದಿಯಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಪೆರಡಾಲ ವಲಯದ ಕುಮಾರಮಂಗಲದ ಬಳಿ ಪರಮಪೂಜ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಇರುವ ಧನ್ವಂತರಿ ಶ್ರೀವನದಲ್ಲಿ ಇತ್ತೀಚೆಗೆ ಸಮಾಲೋಚನಾ ಸಭೆ ಜರಗಿತು. ಧ್ವಜಾರೋಹಣ ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು.
ಶ್ರೀಸಂಸ್ಥಾನದವರು ಈ ಜಾಗಕ್ಕೆ ಹಿಂದೆ ಚಿತ್ತೈಸಿದ್ದು ಮಂತ್ರಾಕ್ಷತೆಯನ್ನಿತ್ತು ಹರಸಿರುತ್ತಾರೆ. ಶ್ರೀಗಳವರ ನಿರ್ದೇಶನದಂತೆ ಈ ಸ್ಥಳದಲ್ಲಿ ಔಷಧ ವೃಕ್ಷಗಳನ್ನು ನೆಟ್ಟು ಬೆಳೆಸಿ ಔಷಧ ವನವನ್ನಾಗಿ ಮಾಡುವ ಉದ್ದೇಶದಲ್ಲಿ ಸಮಿತಿಯು ಕಾರ್ಯಾಚರಿಸುತ್ತಾ ಇದೆ ಎಂದು ಗೋವಿಂದಬಳ್ಳಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ ವಿ ವಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಔಷಧವನ ಸಮಿತಿಯನ್ನು ಪುನರ್ರಚಿಸಲಾಯಿತು. ಸ್ಥಳದಲ್ಲಿ ವಾಸ್ತುರೀತಿಯಲ್ಲಿ ಅಮೂಲ್ಯ ಔಷಧಸಸ್ಯಗಳನ್ನು ನಟ್ಟು ಬೆಳೆಸಲು ತೀರ್ಮಾನಿಸಲಾಯಿತು.
ಮುಂದಿನ ಕೆಲಸಕಾರ್ಯಗಳನ್ನು ವಾಸ್ತುತಜ್ಞ ಮಹೇಶ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಮುಂದುವರಿಸಲು ತೀರ್ಮಾನಿಸಲಾಯಿತು. ಜಯದೇವ ಖಂಡಿಗೆ ಅವರು ಸೂಕ್ತ ವಿಷಯಗಳನ್ನು ಮಂಡಿಸಿದರು. ಯೋಜನೆಯ ರೂಪವನ್ನು ತಯಾರಿಸಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆಯಲು ತೀರ್ಮಾನಿಸಲಾಯಿತು.
ರಾಮಚಂದ್ರ ಭಟ್ ಮಧುರಕಾನ, ಮಂಡಲ ಪದಾಧಿಕಾರಿಗಳು, ಪೆರಡಾಲ ವಲಯ, ನೀರ್ಚಾಲು ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಮಾಲೋಚನೆಯಲ್ಲಿ ಭಾಗವಹಿಸಿದರು. ಬಾಲ ಮಧುರಕಾನ ಸ್ವಾಗತಿಸಿ, ಡಾ. ಶ್ರೀಶ ಪಂಜಿತ್ತಡ್ಕ ವಂದಿಸಿದರು.