ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ ವಾರದಿಂದ ತಮ್ಮ ಆರೋಗ್ಯ, ಆಹಾರ ಸೇವನೆ ಸಂಬಂಧ ಭಾರೀ ಸುದ್ದಿಯಲ್ಲಿದ್ದಾರೆ.
ಟೈಪ್ 2 ಡಯಾಬಿಟಿಸ್ ರೋಗಿಯು ತನ್ನ ಕುಟುಂಬ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವಿಡಿಯೋ ಕಾಲ್ಸಮಾಲೋಚನೆ ನಡೆಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಮಧುಮೇಹ ತಜ್ಞರು ಅಥವಾ ಅಂತಃಸ್ರಾವಶಾಸ್ತ್ರಜ್ಞರಿಂದ ವಿಶೇಷ ಚಿಕಿತ್ಸೆ ಸೇರಿದಂತೆ ಸಿಎಂ ಕೇಜ್ರಿವಾಲ್ ಅವರಿಗೆ ಅಗತ್ಯ ಇರುವ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಏಮ್ಸ್ ಆಸ್ಪತ್ರೆಗೆ ಆದೇಶಿಸಿದ್ದಾರೆ.
ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿ ಹಗರಣ ಸಂಬಂಧ ಇಡಿಯಿಂದ ಬಂಧಿತರಾಗಿ ಏ.1 ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಇಲ್ಲಿ ಅವರಿಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ಅವರನ್ನು ಸಾಯಿಸುವ ಹುನ್ನಾರ ನಡೆದಿದೆ ಎಂಬುದು ಆಮ್ ಆದ್ಮಿ ಪಕ್ಷ ಮಾಡುತ್ತಿರುವ ಆರೋಪ.
ಇದರೊಂದಿಗೆ ಅರವಿಂದ್ ಕ್ರೇಜಿವಾಲ್ ಅವರ ಆರೋಗ್ಯದ ಸಂಬಂಧದ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ನ್ಯಾಯಾಲಕ್ಕೆ ವರದಿ ಸಲ್ಲಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಕೋರ್ಟ್ ಆದೇಶ ನೀಡಿದೆ.
ಕೇಜ್ರಿವಾಲ್ರನ್ನು ಏಕೆ ಬಂಧಿಸಲಾಗಿದೆ?: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಈಗ ರದ್ದಾದ ನೀತಿಯನ್ನು ರೂಪಿಸುವಲ್ಲಿ ಮತ್ತು ಮದ್ಯದ ಪರವಾನಗಿಗಳನ್ನು ನೀಡಲು ಪ್ರತಿಯಾಗಿ ಲಂಚ ಅಥವಾ ಕಿಕ್‌ಬ್ಯಾಕ್‌ಗಳನ್ನು ಪಡೆಯುವಲ್ಲಿ ಮುಖ್ಯಮಂತ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಕೇಜ್ರಿವಾಲ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಇದೊಂದು ರಾಜಕೀಯ ಸೇಡು ಎಂದು ಕರೆದಿದ್ದಾರೆ.