ಮಾನವೀಯತೆಗಿಂತ (Humanity) ದೊಡ್ಡ ಗುಣ ಮತ್ತೊಂದು ಇಲ್ಲ. ಹಸಿದವರ ಹೊಟ್ಟೆ ತುಂಬಿಸುವ ಗುಣ ಎಲ್ಲರಲ್ಲೂ ಇರಲ್ಲ. ಅದಕ್ಕೆ ಎಷ್ಟೋ ಸಾಕ್ಷಿಗಳು ನಾವು ನಮ್ಮ ಕಣ್ಣೆದುರೇ ನೋಡಿರುತ್ತೀವಿ. ಆದರೆ ಕೆಲವರು ತಮ್ಮ ಜೀವನವನ್ನೇ ಬೇರೆಯವರ ಹಸಿವು ನೀಗಿಸಲು ಎಂದೇ ಪರಿಶ್ರಮಿಸುತ್ತಿರುತ್ತಾರೆ.
ಹಣನೇ ಮುಖ್ಯ ಎನ್ನುವ ಜಗತ್ತಲ್ಲಿ ಮಾನವೀಯತೆ ಮುಖ್ಯ ಎನ್ನುವ ಜನ ಸಹ ಇದ್ದಾರೆ. ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಮನುಕುಲಕ್ಕೆ ಒಳಿತು ಮಾಡಬೇಕೆಂಬ ಹಲವು ಜನರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ಸ್ವಾವಲಂಭಿಯಾಗಿ ಕಷ್ಟಪಟ್ಟು ದುಡಿಯುತ್ತಿದ್ದು, ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಹಿಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಸಿವು ನೀಗಿಸುತ್ತಿರುವ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೀದಿ ವ್ಯಾಪಾರಿ ಮಹಿಳೆ ವಿಡಿಯೋ ಆಕೆಯ ಅಸಾಧಾರಣ ದಯೆಯ ಸ್ಪೂರ್ತಿದಾಯಕತೆ ತೋರಿಸತ್ತದೆ. ತನ್ನ ಅಂಗಡಿಗೆ ಬರುವ ಪ್ರತಿಯೊಬ್ಬರು ಹೊಟ್ಟೆ ತುಂಬಾ ತಿನ್ನಬೇಕು ಯಾರೂ ಹೊಟ್ಟೆ ಹಸಿವಿನಿಂದ ಹಿಂದುರುಗಿ ಹೋಗಬಾರದು ಎಂಬ ದಯಾಗುಣ ಹೊಂದಿದ್ದಾರೆ. ಇವರ ಕರುಣೆ, ಮಾನವೀಯತೆ, ತಾಯಿ ಹೃದಯದ ಬಗ್ಗೆ ವ್ಲಾಗರ್ ಒಬ್ಬರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಹಸಿವಿನಿಂದ ಹೋಗಲು ಬಿಡದ ತಾಯಿ
ಬೀದಿ ಬದಿ ವ್ಯಾಪಾರಿ ಮಹಿಳೆ ಬಳಿ ಹೋದ ವ್ಲಾಗರ್ 2000 ರೂಪಾಯಿಯನ್ನು ಆಕೆಗೆ ತೆಗೆದುಕೊಳ್ಳುವಂತೆ ಹೇಳುತ್ತಾ, 2000 ರೂಪಾಯಿಗೂ ಆಹಾರ ಪಾರ್ಸಲ್ ಬೇಕು ಎಂದು ಕೇಳಿದ್ದಾರೆ. ಆದರೆ ಮಹಿಳೆ ಮೊದಲು ಹಣವನ್ನು ಪಡೆಯದೆ, ತಮ್ಮ ಬಳಿ ಅಷ್ಟು ಹಣಕ್ಕೆ ಆಹಾರ ಇದೆಯಾ ಎಂದು ನೋಡಿದ್ದಾರೆ. ಅನ್ನ, ಸಾರು ಎಲ್ಲವನ್ನು ಪರಿಶೀಲಿಸಿದ ಮಹಿಳೆ ತಮ್ಮ ಬಳಿ ಅಷ್ಟು ಹಣಕ್ಕೆ ಪಾರ್ಸಲ್ ನೀಡುವಷ್ಟು ಆಹಾರವಿಲ್ಲ. ಆದರೆ ನಿಮ್ಮೊಬ್ಬರಿಗೆ ರೋಟಿ ಮಾಡಿಕೊಡುತ್ತೇನೆ, ನೀವು ತಿಂದು ಹೋಗಿ ಎಂದು ಹೇಳಿದ್ದಾರೆ.
ರೊಟ್ಟಿ ಮಾಡಿಕೊಟ್ಟ ತಾಯಿ
ಇದೇ ವೇಳೆ ನನ್ನ ಅಂಗಡಿಗೆ ಬರುವವರು ಯಾರೂ ಖಾಲಿ ಹೊಟ್ಟೆಯಲ್ಲಿ ಹೋಗಬಾರದು. ಅದಕ್ಕಾಗಿಯೇ ನಾನು ಸ್ವಲ್ಪ ಹಿಟ್ಟನ್ನು ಎತ್ತಿಟ್ಟಿರುತ್ತೇನೆ. ಅದೇ ಹಿಟ್ಟಿನಲ್ಲಿ ನಾನು ನಿಮಗೆ ರೋಟಿ, ಥಾಲಿ ಮಾಡಿಕೊಡುತ್ತೇನೆ ತಿಂದು ಹೋಗಿ. ನೀವು ಯಾರನ್ನಾದರೂ ಕೇಳಿ ನನ್ನ ಅಂಗಡಿಗೆ ಬಂದವರು ಹೊಟ್ಟೆ ಹಸಿವಿನಿಂದ ಹೋಗಲು ಬಿಡುವುದಿಲ್ಲ ಎಂದು ಕೇಳಿಕೊಂಡಿದ್ದಾರೆ.
ನೆಟ್ಟಿಗರಿಂದ ಶ್ಲಾಘನೆ
ಮಹಿಳೆಯ ದಯಾಗುಣ ಹಾಗೂ ಮಾನವೀಯತೆಯ ಬಗ್ಗೆ ಆಕೆಗೆ ಗೊತ್ತಿಲ್ಲದೆ ವಿಡಿಯೋ ಮಾಡಿರುವ ವ್ಲಾಗರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ಹಲವರು ಹೃದಯ ಗೆದ್ದಿದೆ. ಮಹಿಳೆಯ ಧಾರಾಳತೆ, ದಯೆಯು ಎಲ್ಲರ ಮನಕ್ಕೆ ಹತ್ತಿರವಾಗಿದೆ. ಈ ವಿಡಿಯೋ ಈಗಾಗಲೇ 82 ಮಿಲಿಯನ್ ವೀಕ್ಷಣೆ ಪಡೆದಿದೆ. ಆಕೆಯ ಗುಣಕ್ಕೆ ಹಲವರು ತಾಯಿಯ ಗುಣ ಎಂದು ಬಣ್ಣಿಸಿದ್ದಾರೆ. "ಮುಗ್ಧ ತಾಯಿಯ ನಿಜವಾದ ಅರ್ಥ" ಮತ್ತು "ನೀವು ನನ್ನ ತಾಯಿ" ಎಂದು ಅನೇಕ ಕಾಮೆಂಟ್ ಗಳ ಸುರಿಮಳೆ ಮಾಡುತ್ತಿದ್ದಾರೆ.
ಮತ್ತೊಬ್ಬ ವ್ಯಕ್ತಿ, "ಮಾನವೀಯತೆ ಇನ್ನೂ ಜೀವಂತವಾಗಿ ಉಳಿದಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು "ದೇವರು ನಿಮಗೆ ಆಶೀರ್ವದಿಸಲಿ, ನಿಮ್ಮ ಸೇವೆ, ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ" ಎಂದು ಹಾರೈಸಿದರು.
ಹಣ ನೋಡಿದ ಕೂಡಲೇ ತಮ್ಮಿಂದ ಕೆಲಸ ಆಗುತ್ತೋ ಇಲ್ವೋ ಎಂದು ಯೋಚಿಸದೆ ಹಣಕ್ಕೆ ತೆಗೆದಿಟ್ಟುಕೊಳ್ಳುವ ಜನರಲ್ಲಿ ಈ ರೀತಿ ಮಾನವೀಯತೆ ಮೆರೆದ ಬೀದಿಬದಿ ವ್ಯಾಪಾರಿ ಮಹಿಳೆಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.