ಕಾಸರಗೋಡು : ಲೋಕಸಭಾ ಕ್ಷೇತ್ರ ಚುನಾವಣೆಯ ನಾಮಪತ್ರ ಸ್ವೀಕಾರ ವಿಚಾರದಲ್ಲಿ ಯಾವುದೇ ಲೋಪಗಳುಂಟಾಗಿಲ್ಲ. ಸ್ವತಂತ್ರ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದರು.
ನಾಮಪತ್ರ ಸ್ವೀಕಾರ ಸಂದರ್ಭ ಹೆಚ್ಚು ಜನ ಅಬ್ಯರ್ಥಿಗಳು ಏಕಕಾಲದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭ ಬಂದಲ್ಲಿ ಆಯಾ ದಿನ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕೊಠಡಿಯ ಮುಂಭಾಗದಲ್ಲಿ ಸ್ಥಾಪಿಸಿರುವ ಹೆಲ್ಪ್ ಡೆಸ್ಕ್ ನಿಂದ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಟೋಕನ್ ಸ್ವೀಕಾರಕ್ಕೆ ಅಭ್ಯರ್ಥಿ ಅಥವಾ ಅವರ ನಾಮ ನಿರ್ದೇಶಕ ನಾಮಪತ್ರದೊಂದಿಗೆ ಹಾಜರಾಗಿ ಟೋಕನ್ ಸ್ವೀಕರಿಸಬೇಕು ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಬುಧವಾರ ಬೆಳಗ್ಗೆ 7.06ಕ್ಕೆ ಅಭ್ಯರ್ಥಿ ಎಂ ವಿ ಬಾಲಕೃಷ್ಣನ್ ಅವರ ನಾಮ ನಿರ್ದೇಶಕ ಅಜೀಜ್ ಕಡಪ್ಪುರಂ ಹಾಗೂ ಬೆಳಗ್ಗೆ 8.55ಕ್ಕೆ ಐಕ್ಯರಂಗ ಅಭ್ಯರ್ಥಿ ರಾಜಮೋಹನ್ ಉಣ್ಣಿತ್ಥಾನ್ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಆಗಮಿಸಿದ್ದು, ಈ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲೂ ದಾಖಲಾಗಿದೆ. ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದಂತೆ ಬೆಳಗ್ಗೆ 10ಕ್ಕೆ ಟೋಕನ್ ವಿತರಣೆ ಆರಂಭಿಸಲಾಗಿದ್ದು, ಮೊದಲು ಆಗಮಿಸಿದ ಅಜೀಜ್ ಕಡಪ್ಪುರ ಅವರಿಗೆ ಮೊದಲ ಟೋಕನ್ ನೀಡಲಾಗಿದೆ. ನಂತರ ಆಗಮಿಸಿರುವ ರಾಜ್‍ಮೋಹನ್ ಉಣ್ಣಿತ್ತಾನ್ ಅವರಿಗೆ ಎರಡನೇ ಟೋಕನ್ ನೀಡಿದರೂ ಇದನ್ನು ಸ್ವೀಕರಿಸದೆ, ಧರಣಿ ನಡೆಸಿರುವುದು ಸರಿಯಲ್ಲ. ಮೊದಲು ಟೋಕನ್ ಸ್ವೀಕರಿಸಲು ಆಗಮಿಸಿದ ವ್ಯಕ್ತಿಗಳ ಸಿಸಿ ಟಿವಿ ದೃಶ್ಯಾವಳಿ ಸ್ಪಷ್ಟವಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಆಧಾರರಹಿತ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಫೋಟೋ : ಐನಾಮಪತ್ರ ಸ್ವೀಕಾರ ಸಂದರ್ಭ ಟೋಕನ್ ನೀಡಿಕೆಯಲ್ಲಿ ಲೋಪವುಂಟಾಗಿರುವುದಾಗಿ ಆರೋಪಿಸಿ ಐಕ್ಯರಂಗ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್ ಮೊಲಾದವರು ಜತೆಗಿದ್ದಾರೆ.