ಜಮ್ಮು: ಬಿಜೆಪಿ ಜನರ ಹೃದಯ ಗೆಲ್ಲುವುದರಲ್ಲಿ ನಂಬಿಕೆ ಹೊಂದಿದೆ. ಹೀಗಾಗಿ ಕಣಿವೆಯಾದ್ಯಂತ ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಣಿವೆಯಲ್ಲಿ ಯುವಕರ ಮೇಲೆ ನಕಲಿ ಎನ್‌ಕೌಂಟರ್‌ಗಳು ಮತ್ತು ಗುಂಡಿನ ದಾಳಿಗಳಿಗೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಈ ಮೂರು ಪಕ್ಷಗಳು ಕಾರಣವೆಂದು ಆರೋಪಿಸಿದ್ದಾರೆ.
ಬಿಜೆಪಿಯು ಕಾಶ್ಮೀರ ಜನರ ಕಲ್ಯಾಣಕ್ಕಿಂತ, ಅಲ್ಲಿನ ನೆಲದ ಮೇಲೆ ಹೆಚ್ಚಿನ ಹಿತಾಸಕ್ತಿ ಹೊಂದಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಶಾ, ಪಕ್ಷವು ಕಾಶ್ಮೀರಿಯನ್ನರ ಜೀವನ ಸುಧಾರಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರವೇ ಒತ್ತು ನೀಡಿದೆ ವಿನಃ ನೆಲದ ವಿಚಾರಕ್ಕೆ ಅಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
'ನಾನು, ಫಾರೂಕ್ ಅಬ್ದುಲ್ಲಾ( ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ) ಹಾಗೂ ಪಿಡಿಪಿ ಪಕ್ಷವನ್ನು ಕೇಳಲು ಬಯಸುತ್ತೇನೆ, ಯಾರ ಆಡಳಿತದಲ್ಲಿ ಹೆಚ್ಚು ನಕಲಿ ಎನ್‌ಕೌಂಟರ್‌ಗಳು ನಡೆದಿವೆ. ಹಾಗೂ ಇಲ್ಲಿನ ಮಕ್ಕಳ ಮೇಲೆ ಗುಂಡು ಹಾರಿಸಿದವರು ಯಾರು?'ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಿದೆ. ಕಣಿವೆಯಲ್ಲಿನ ಭಯೋತ್ಪಾದನೆ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಸಂವಿಧಾನದ 370 ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದೆ ಹಾಗೂ ಪಾಕಿಸ್ತಾನದ ಪ್ರಾಯೋಜಿತ ದಾಳಿಗಳಿಗೆ ತಿರುಗೇಟು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.