ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸಂಶೋಧನಾ ವಿದ್ಯಾರ್ಥಿನಿ, ಒಡಿಶಾ ಭಾರ್ಗರ್ ಜಿಲ್ಲೆಯ ರುಬಿ ಪಟೇಲ್(27)ಮೃತದೇಹ ಕ್ಯಾಂಪಸ್‍ನ ಹಾಸ್ಟೆಲ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೇಂದ್ರೀಯ ವಿಶ್ವ ವಿದ್ಯಾಲಯದ ಹಿಂದಿ ಭಾಷಾ ತಾರತಮ್ಯ ಸಾಹಿತ್ಯ ವಿಭಾಗ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿನಿ ಆತ್ಮಹತ್ಯೆ ಬಗ್ಗೆ ಎಬಿವಿಪಿ ಹಾಗೂ ಎಸ್‍ಎಫ್‍ಐ ಸಂಘಟನೆಗಳು ವಿಶ್ವ ವಿದ್ಯಾಲಯದ ಪ್ರಭಾರ ಉಪಕುಲಪತಿ ಪ್ರೊ. ಕೆ.ವಿ ಬೈಜು ಅವರ ಕಚೇರಿ ಎದುರು ಪ್ರತ್ಯೇಕವಾಗಿ ಘೆರಾವೋ ನಡೆಸಿದರು. ಎಸ್‍ಎಫ್‍ಐ ಸಂಘಟನೆ ಕಾರ್ಯಕರ್ತರು ಉಪಕುಲಪತಿ ಕಚೇರಿ ಹೊರಗಿಂದ ಬಾಗಿಲು ಮುಚ್ಚಿ ಸುಮಾರು ಎರಡು ತಾಸು ಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರಭಾರ ಉಪಕುಲಪತಿ ಪ್ರೊ. ಕೆ.ವಿ ಬೈಜು ಕಚೇರಿಯೊಳಗಿದ್ದರು.
ವಿದ್ಯಾರ್ಥಿನಿ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎರಡೂ ಸಂಘಟನೆಗಳು ಆಗ್ರಹಿಸಿದೆ. ಎಬಿವಿಪಿ ನಡೆಸಿದ ಪ್ರತಿಭಟನೆಗೆ ಯೂನಿಟ್ ಅದ್ಯಕ್ಷೆ ಶ್ರೀಲಕ್ಷ್ಮೀ, ಕಾರ್ಯದರ್ಶಿ ಸುರೇಂದ್ರನ್ ಹಾಗೂ ಎಸ್‍ಎಫ್‍ಐ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಗೆ ಅಮಲ್ ಅಜಾದ್ ಹಾಗೂ ಅಭಿಜಿತ್ ನೇತೃತ್ವ ನೀಡಿದರು. ಈ ಸಂದರ್ಭ ವಿಶ್ವ ವಿದ್ಯಾಲಯದಲ್ಲಿ ಸೈಕಾಲಜಿಸ್ಟ್ ಸೇವೆ ಲಭ್ಯವಾಗುವಂತೆ ಮಾಡುವ ಬಗ್ಗೆ ಲಿಖಿತ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದರು. ವಿವಿ ಹಸ್ಟೆಲ್‍ನೊಳಗೆ 2023ರ ಪೆಬ್ರವರಿಯಲ್ಲಿ ಉತ್ತರಪ್ರದೇಶ ಗಾಜಿಪುರ್ ನಿವಾಸಿ, ವಿವಿ ವಿದ್ಯಾರ್ಥಿ ನಿತೇಶ್ ಯಾದವ್ ಎಂಬವರು ನೇಣು ಬಿಗಿದು ಆತ್ಮಹತ್ಯೆಗೈದಿದ್ದರು.