ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಸಂಘ ಮತ್ತು ರೈ ಬ್ರದರ್ಸ್ ಬೇಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಎರಡು ದಿನಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಮೈದಾನದಲ್ಲಿ ಜರಗಿತು. ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ವಹಿಸಿದ್ದರು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು ಬಹುಮಾನ ವಿತರಿಸಿ ಮಾತನಾಡಿ, ಬಂಟ ಯುವಕರು ಕ್ರಿಕೆಟ್ ಪಂದ್ಯಾಟ ನಡೆಸಿ ಪ್ರೋತ್ಸಾಹ ಕೊಡುತ್ತಾ ಯುವಕರನ್ನು ಒಟ್ಟುಗೂಡಿಸಲು ಸಾಧ್ಯ. ಬಂಟ ಯುವಕರು ಸಂಘದ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂಘದ ಉನ್ನತಿಗೆ ಶ್ರಮಿಸಬೇಕು ಎಂದು ಕರೆನೀಡಿದರು.
ಬದಿಯಡ್ಕ ಪಂಚಾಯತಿ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ನಾನ, ಪ್ರದಾನ ಕಾರ್ಯದರ್ಶಿ ಪ್ರದೀಪ ಕುಮಾರ ಶೆಟ್ಟಿ ಬೇಳ, ಉದ್ಯಮಿ ಪ್ರತೀಕ್ ಆಳ್ವ ಪೆರಡಾಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಬಂಟ್ಸ್ ಪ್ರೀಮಿಯರ್ ಲೀಗ್ ಸಂಚಾಲಕ ಗುರುರಾಜ್ ರೈ ಬೇಳ ಸ್ವಾಗತಿಸಿ ವಂದಿಸಿದರು.
ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿದ್ದವು. ಬಂಟ್ಸ್ ದೇರಂಬಳ ಪ್ರಥಮ ಸ್ಥಾನ, ಶೆಟ್ಟಿ ಬ್ರದರ್ಸ್ ಕೂಳೂರು ದ್ವಿತೀಯ ಸ್ಥಾನ ಪಡೆಯಿತು.