ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಆಗಿದ್ದ ಅನಿಲ್ ಮಸೀಹ್ ಅವರು ತಮ್ಮ ನಡವಳಿಕೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮಸೀಹ್ ಅವರು ಪ್ರಕಟಿಸಿದ್ದ ಚುನಾವಣಾ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಫೆಬ್ರುವರಿಯಲ್ಲಿ ರದ್ದುಪಡಿಸಿತ್ತು.
ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಮತ್ತು ಮತ ಎಣಿಕೆ ಸಮಯದಲ್ಲಿ ದುರ್ವತನೆ ತೋರಿದ್ದಕ್ಕಾಗಿ ಮಸೀಹ್ ವಿರುದ್ಧ ಸುಪ್ರೀಂ ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತು.
'ನಾನು ಆತಂಕದಲ್ಲಿದ್ದು, ಖಿನ್ನತೆ ಎದುರಿಸುತ್ತಿದ್ದೇನೆ. ಮತಪತ್ರಗಳನ್ನು ತಿದ್ದಿದ ಆರೋಪವನ್ನು ನಿರಾಕರಿಸಿ ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್ ಅನ್ನು ಹಿಂಪಡೆಯುವುದಾಗಿ' ಮಸೀಹ್ ಹೇಳಿದರು.
ಜನವರಿ 30ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಪರಾಜಿತರಾಗಿದ್ದ ಎಎಪಿ- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಹೊಸ ಮೇಯರ್ ಎಂದು ಫೆಬ್ರುವರಿಯಲ್ಲಿ ಘೋಷಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಮಸೀಹ್ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, 'ಮಸೀಹ್ ಅವರು ಸಂಪೂರ್ಣ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ' ಎಂದರು.
ಕುಮಾರ್ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಚುನಾವಣಾಧಿಕಾರಿಯ ಕ್ಷಮಾಪಣೆಯನ್ನು ವಿರೋಧಿಸಿದರು. ಪೀಠವು ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.