ಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ ಹಾಗೂ ಇಸ್ಲಾಮಾಬಾದ್ ಮತ್ತು ಲಾಹೋರ್ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಿಗೆ ರವಾನಿಸಿರುವ 'ಸಂಶಯಾಸ್ಪದ ಪುಡಿ' ಲೇಪಿತ ಬೆದರಿಕೆ ಪತ್ರಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಹೇಳಿದ್ದಾರೆ.
'ಶಂಕಾಸ್ಪದ ಪುಡಿ ಲೇಪಿತ ಪತ್ರಗಳನ್ನು ನ್ಯಾಯಮೂರ್ತಿಗಳಿಗೆ ಕಳುಹಿಸಿರುವ ವಿಷಯದಲ್ಲಿ ಯಾವುದೇ ರಾಜಕಾರಣ ಬೆರೆಸದೇ, ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು' ಎಂಬ ಪ್ರಧಾನಿ ಷರೀಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ನ್ಯೂಸ್ ವರದಿ ಮಾಡಿದೆ.
ಇಸ್ಲಾಮಾಬಾದ್ ಹೈಕೋರ್ಟ್‌ನ 8 ನ್ಯಾಯಮೂರ್ತಿಗಳು ಹಾಗೂ ಲಾಹೋರ್ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳು ಈ ಬೆದರಿಕೆ ಪತ್ರಗಳನ್ನು ಸ್ವೀಕರಿಸಿದ್ದಾರೆ. ಅಂಥ್ರಾಕ್ಸ್ ಎಂಬ ಸೋಂಕು ರೋಗಕ್ಕೆ ಸಂಬಂಧಿಸಿದ ಪುಡಿಯನ್ನು ಈ ಪತ್ರಗಳಿಗೆ ಲೇಪಿಸಲಾಗಿತ್ತು ಎಂದು ಹೇಳಲಾಗಿದೆ.
ಬಿಳಿ ಬಣ್ಣದ ಲಕೋಟೆಗಳಲ್ಲಿ ಈ 'ಶಂಕಾಸ್ಪದ ಪುಡಿ' ಲೇಪಿತ ಪತ್ರಗಳನ್ನು ಹೈಕೋರ್ಟ್‌ಗಳ ವಿಳಾಸಕ್ಕೆ ಕಳುಹಿಸಲಾಗಿದೆ.
'ಪಾಕಿಸ್ತಾನದ ಪ್ರಜೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ನ್ಯಾಯಮೂರ್ತಿಗಳೇ ಜವಾಬ್ದಾರರು' ಎಂಬ ಒಕ್ಕಣೆಯೂ ಈ ಪತ್ರದಲ್ಲಿದೆ ಎನ್ನಲಾಗಿದೆ. ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.