ನವದೆಹಲಿ: ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಅಥವಾ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದರೆ, ತಕ್ಕ ಪ್ರತ್ಯುತ್ತರ ನೀಡಲಾಗುವುದು ಮತ್ತು ಅವರು ಪಾಕಿಸ್ತಾನಕ್ಕೆ ಓಡಿಹೋದರೆ, ನೆರೆಯ ದೇಶಕ್ಕೂ ನುಗ್ಗಿ ಹೊಡೆಯುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
2019 ರ ನಂತರ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹತ್ಯೆ ನಡೆಸಿವೆ ಎಂದು ಬ್ರಿಟಿಷ್ ಪತ್ರಿಕೆ "ದಿ ಗಾರ್ಡಿಯನ್" ವರದಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, "ನೆರೆಯ ದೇಶದ ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಅಥವಾ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದರೆ ನಾವು ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ" ಎಂದು ಹೇಳಿದರು.
ಉಗ್ರರು ಪಾಕಿಸ್ತಾನಕ್ಕೆ ಓಡಿಹೋದರೆ, ಅವರನ್ನು ಕೊಲ್ಲಲು ನಾವು ಪಾಕಿಸ್ತಾನಕ್ಕೆ ಪ್ರವೇಶಿಸುತ್ತೇವೆ ಎಂದು ಅವರು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಶಕ್ತಿ ಭಾರತಕ್ಕಿದೆ ಮತ್ತು ಪಾಕಿಸ್ತಾನ ಅದನ್ನು ಅರಿತುಕೊಳ್ಳಲು ಆರಂಭಿಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಾತನಾಡಿದ ರಾಜನಾಥ್ ಸಿಂಗ್ ಪಿಒಕೆ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿಯೇ ಇತ್ತು, ಮುಂದೆಯೂ ಇರಲಿದೆ, ಯಾವಾಗಲೂ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದಿದ್ದಾರೆ. ತಾವು ಭಾರತದೊಂದಿಗೆ ಇರಬೇಕೆಂದು ಸ್ವತಃ ಪಿಒಕೆ ಜನರೇ ಒತ್ತಾಯಿಸುತ್ತಾರೆ ಅಂತ ರಾಜನಾಥ್ ಸಿಂಗ್ ಹೇಳಿದ್ದಾರೆ.