ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ', ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಈ ಬಾರಿಯ ಚುನಾವಣೆಯು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವವರು ಹಾಗೂ ರಕ್ಷಿಸಲು ಹೋರಾಡುತ್ತಿರುವವರ ನಡುವೆ ನಡೆಯಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದಿಕ್ಕಿಂತಲೂ, ವಾಸ್ತವದಲ್ಲಿ ಸ್ಪರ್ಧೆ ಅತ್ಯಂತ ಪೈಪೋಟಿಯಿಂದ ಕೂಡಿದೆ' ಎಂದಿರುವ ಅವರು, ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಣಾಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, 2004ರಲ್ಲಿ ಮಾಡಿದ್ದಂತೆಯೇ 'ಇಂಡಿಯಾ ಶೈನಿಂಗ್' ಪ್ರಚಾರ ತಂತ್ರಕ್ಕೆ ಪ್ರತಿಯಾಗಿ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
2004ರ ಸಾರ್ವತ್ರಿಕೆ ಚುನಾವಣೆ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ, ಆಕ್ರಮಣಕಾರಿಯಾಗಿ 'ಇಂಡಿಯಾ ಶೈನಿಂಗ್' ಪ್ರಚಾರ ಅಭಿಯಾನ ನಡೆಸಿತ್ತು ಎಂಬುದನ್ನು ಸ್ಮರಿಸಿದ ರಾಹುಲ್, 'ಆಗ ಯಾರು ಗೆದ್ದಿದ್ದರು ಎಂಬುತು ನೆನಪಿದೆಯೇ?' ಎಂದು ಕೇಳಿದ್ದಾರೆ. ಆ ಚುನಾವಣೆಯಲ್ಲಿ ಎನ್‌ಡಿಎ ಎದುರು ಜಯ ಸಾಧಿಸಿದ್ದ, ಯುಪಿಎ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು.
2024ರ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ, 'ಚುನಾವಣೆಯಲ್ಲಿ ಸೈದ್ಧಾಂತಿಕ ಹೋರಾಟ ನಡೆಸಲು ಹಾಗೂ ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಆರಂಭವಾಗಲಿದ್ದು, ಒಟ್ಟು 7 ಹಂತಗಳಲ್ಲಿ ನಡೆಯಲಿದೆ.
ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ, ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಉದ್ಯೋಗ ಭರ್ತಿ ಸೇರಿದಂತೆ ವಿವಿಧ ಭರವಸೆಗಳನ್ನೊಳಗೊಂಡ 'ನ್ಯಾಯ ಪತ್ರ' ಹೆಸರಿನ ಪ್ರಣಾಳಿಕೆಯನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.