ರುದ್ರಪುರ: ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ದಳ್ಳುರಿ' ಉಂಟಾಗುತ್ತದೆ ಎಂದಿರುವ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಅವರ ವಿರುದ್ಧ ವಾಕ್ ಪ್ರಹಾರ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ಎಲ್ಲೆಡೆಯಿಂದಲೂ ಅಳಿಸಿ ಹಾಕಿ ಎಂದು ಮಂಗಳವಾರ ಮತದಾರರಿಗೆ ಕರೆ ನೀಡಿದರು.
ರುದ್ರಪುರ: ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ದಳ್ಳುರಿ' ಉಂಟಾಗುತ್ತದೆ ಎಂದಿರುವ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಅವರ ವಿರುದ್ಧ ವಾಕ್ ಪ್ರಹಾರ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ಎಲ್ಲೆಡೆಯಿಂದಲೂ ಅಳಿಸಿ ಹಾಕಿ ಎಂದು ಮಂಗಳವಾರ ಮತದಾರರಿಗೆ ಕರೆ ನೀಡಿದರು.
ಉತ್ತರಾಖಂಡದ ರುದ್ರಪುರದಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
'ಕಾಂಗ್ರೆಸ್ ಮತ್ತು 'ಇಂಡಿಯಾ' ಕೂಟದ ಉದ್ದೇಶ ಸ್ಪಷ್ಟವಿದೆ. ಕಾಂಗ್ರೆಸ್‌ನ ರಾಜಕುಟುಂಬದ 'ಶೆಹಜಾದ' (ರಾಜಕುಮಾರ) ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬೆಂಕಿ ಬೀಳುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ. ಅಧಿಕಾರದಿಂದ ದೂರ ಇರುವ ಅವರು ಹತಾಶೆಯಿಂದ ದೇಶಕ್ಕೆ ಬೆಂಕಿ ಹಚ್ಚುವ ಮಾತು ಆಡುತ್ತಿದ್ದಾರೆ. ಹಾಗೆ ಮಾಡಲು ನೀವು ಬಿಡುವಿರೇ? ಪ್ರಜಾಪ್ರಭುತ್ವದಲ್ಲಿ ಇಂಥ ಭಾಷೆ ಬಳಸುತ್ತಾರೆಯೇ? ನೀವು ಅವರನ್ನು ಶಿಕ್ಷಿಸುವುದಿಲ್ಲವೇ? ಎಂದು ಮೋದಿ ಪ್ರಶ್ನಿಸಿದರು.
'ಅವರು ಬೆಂಕಿ ಹಚ್ಚುವ ಮಾತನ್ನಾಡುತ್ತಿದ್ದರೆ, ಮೋದಿ ಕಳೆದ 10 ವರ್ಷಗಳಿಂದ ಅಂಥ ಬೆಂಕಿ ನಂದಿಸುತ್ತಿದ್ದಾರೆ' ಎಂದು ಹೇಳಿದರು.
'ಕಾಂಗ್ರೆಸ್ ತುರ್ತುಪರಿಸ್ಥಿತಿಯ ಮನಸ್ಥಿತಿಯನ್ನು ಹೊಂದಿದ್ದು, ಅದಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿದಿಲ್ಲ. ಆದ್ದರಿಂದ ಅದು ಜನಾದೇಶದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ' ಎಂದು ದೂರಿದರು.
'ನನ್ನನ್ನು ಭ್ರಷ್ಟರು ಬೆದರಿಸುತ್ತಿದ್ದಾರೆ ಮತ್ತು ನಿಂದಿಸುತ್ತಿದ್ದಾರೆ. ಆದರೆ, ನಾನು ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯನ್ನು ಹೆಚ್ಚಿಸುತ್ತೇನೆ' ಎಂದು ತಿಳಿಸಿದರು.
'ಕಾಂಗ್ರೆಸ್ ಸರ್ಕಾರಗಳ ದೌರ್ಬಲ್ಯವು ದೇಶದ ವಿಭಜನೆಗೆ ಮತ್ತು ಕರ್ತಾರಪುರ ಸಾಹಿಬ್ ಗುರುದ್ವಾರ ಭಾರತೀಯ ಸಿಖ್ಖರ ಕೈತಪ್ಪಲು ಕಾರಣವಾಯಿತು' ಎಂದು ಆರೋಪಿಸಿದರು.
'ಮೂರನೇ ಅವಧಿಯಲ್ಲಿ ನಿಮ್ಮ ಮಗ ಮತ್ತೊಂದು ದೊಡ್ಡ ಕೆಲಸ ಮಾಡಲಿದ್ದಾನೆ. ನೀವು ದಿನದ 24 ಗಂಟೆ ವಿದ್ಯುತ್, ಶೂನ್ಯ ವಿದ್ಯುತ್ ಶುಲ್ಕ ಪಡೆಯುವುದರ ಜತೆಗೆ ವಿದ್ಯುತ್‌ನಿಂದ ಹಣವನ್ನೂ ಗಳಿಸಬಹುದು. ಮೋದಿಯು 'ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನಾ' ಆರಂಭಿಸಿದ್ದಾರೆ' ಎಂದು ತಿಳಿಸಿದರು.
ಮೋದಿ ಗ್ಯಾರಂಟಿ ಎಂದರೆ ಗ್ಯಾರಂಟಿಯ ಈಡೇರಿಕೆ ಎಂದು ಅವರು ಹೇಳಿದರು.
ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯನ್ನು ತಡೆಯಲು ಎಲ್ಲ ಭ್ರಷ್ಟರು ರ್‍ಯಾಲಿ ಮಾಡುತ್ತಿರುವ ಮೊದಲ ಲೋಕಸಭಾ ಚುನಾವಣಾ ಇದಾಗಿದೆ
-ನರೇಂದ್ರ ಮೋದಿ ಪ್ರಧಾನಿ