ಕಾಸರಗೋಡು : ಜಿಲ್ಲೆ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು, ಏಪ್ರಿಲ್ 26 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಚುನಾವಣೆ ನಡೆಯಲಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದು, ಕ್ಷೇತ್ರದಲ್ಲಿ ಒಟ್ಟು 14,52,230 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 7,01,475 ಪುರುಷರು, 7,50,741 ಮಹಿಳೆಯರು ಮತ್ತು 14 ಟ್ರಾನ್ಸ್‍ಜೆಂಡರ್ ಮತದಾರರಿದ್ದಾರೆ.
ಸಾರ್ವಜನಿಕ ವೀಕ್ಷಕ ರಿಶಿರೇಂದ್ರ ಕುಮಾರ್, ಪೆÇಲೀಸ್ ವೀಕ್ಷಕ ಸಂತೋಷ್ ಸಿಂಗ್ ಗೌರ್ ಮತ್ತು ವೆಚ್ಚ ವೀಕ್ಷಕ ಆನಂದ್ ರಾಜ್ ಚುನಾವಣಾ ಪ್ರಕ್ರಿಯೆಯ ಮೇಲೆ ನಿಗಾ ವಹಿಸುತ್ತಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮನೆಯಲ್ಲಿ ಮತದಾನಕ್ಕಾಗಿ 85ವರ್ಷ ಮೇಲ್ಪಟ್ಟ 5467ಮಂದಿಯಲ್ಲಿ 5331ಮಂದಿ ಹಾಗೂ 3687 ವಿಕಲಚೇತನ ಮತದಾರರಲ್ಲಿ 3566 ಮಂದಿ ಈಗಾಗಲೇ ಮತ ಚಲಾಯಿಸಿದ್ದಾರೆ. 711 ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಿದವರಲ್ಲಿ 642 ಮತದಾರರು ಮತ ಚಲಾಯಿಸಿದ್ದಾರೆ.
ಕಾಸರಗೋಡು ಕ್ಷೇತ್ರದಲ್ಲಿ ಒಟ್ಟು 14,52,230 ಮತದಾರರಿದ್ದು, ಇವರಲ್ಲಿ 7,01,475 ಪುರುಷ ಮತದಾರರು 7,50,741 ಮಹಿಳಾ ಮತದಾರರು, 14 ತೃತೀಯಲಿಂಗಿ ಮತದಾರರು, 32,827 ಮಂದಿ ಚೊಚ್ಚಲ ಮತದಾರರು, 4934 ಅನಿವಾಸಿ ಮತದಾರರು, 3300 ಸೇವಾ ಮತದಾರರು, 711 ಅಗತ್ಯ ಸೇವಾ ಮತದಾರರಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರವು ಒಂದು ಆಕ್ಸಿಲರಿ ಬೂತ್ ಸೇರಿದಂತೆ 1334 ಮತಗಟ್ಟೆಗಳನ್ನು ಹೊಂದಿದೆ. ಮಂಜೇಶ್ವರ-205, ಕಾಸರಗೋಡು-190, ಉದುಮ- 198, ಕಾಞಂಗಾಡ್- 196, ತ್ರಿಕರಿಪುರ-194, ಪಯ್ಯನ್ನೂರು 181(1 ಸಹಾಯಕ ಮತಗಟ್ಟೆ) ಕಲ್ಲ್ಯಶ್ಶೇರಿ- 170ಮತಗಟ್ಟೆಗಳಿವೆ.
ಇಂದು ಮತದಾನ ಸಾಮಗ್ರಿ ವಿತರಣೆ:
ಏಪ್ರಿಲ್ 25 ರಂದು ಮತದಾನ ಸಾಮಗ್ರಿಗಳ ವಿತರಣೆ ನಡೆಯಲಿದ್ದು, ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಸ್ವಾಗತ ವಿತರಣಾ ಕೇಂದ್ರಗಳಲ್ಲಿ ಏಪ್ರಿಲ್ 25 (ಗುರುವಾರ) ಬೆಳಗ್ಗೆ ಮತದಾನಕ್ಕೆ ಮತಗಟ್ಟೆ ಸಾಮಗ್ರಿಗಳ ವಿತರಣೆ ನಡೆಯಲಿದೆ. ಮಂಜೇಶ್ವರ ಕ್ಷೇತ್ರದಲ್ಲಿ-ಜಿಎಚ್‍ಎಸ್‍ಎಸ್ ಕುಂಬಳ, ಕಾಸರಗೋಡು- ಕಾಸರಗೋಡು ಸರ್ಕಾರಿ ಕಾಲೇಜು, ಉದುಮ- ಚೆಮ್ನಾಡ್ ಜಮಾ ಆತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್- ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್, ತೃಕರಿಪುರ- ಸ್ವಾಮಿ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆ ಕಾಞಂಗಾಡ್, ಪಯ್ಯನ್ನೂರು- ಎ.ಕುಂಜಿರಾಮನ್ ಅಡಿಯೋಡಿ ಸ್ಮಾರಕ ಜಿವಿಎಚ್‍ಎಸ್‍ಎಸ್ ಪಯ್ಯನ್ನೂರು, ಕಲ್ಯಾಶ್ಯೇರಿ- ಸರ್ಕಾರಿ: ಹೈಯರ್ ಸೆಕೆಂಡರಿ ಶಾಲೆ ಮಾಡಾಯಿಯಲ್ಲಿ ಸಾಮಗ್ರಿ ವಿತರಣೆ ನಡೆಯುವುದು. ಒಟ್ಟು 4561 ಮತಗಟ್ಟೆ ಅಧಿಕಾರಿಗಳು ಮತದಾನ ಕರ್ತವ್ಯದಲ್ಲಿರಲಿದ್ದಾರೆ.