ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹದಿನಾಲ್ಕನೇ ವಾರ್ಡ್ ವ್ಯಾಪ್ತಿಯ ಶೇಣಿ ಮಣಿಯಂಪಾರೆ ಸಮೀಪದ ಬಾರೆದಳ ಎಂಬಲ್ಲಿ ಜನ ವಾಸ ಇರುವ ಮನೆಯೊಂದಕ್ಕೆ ಸೋಮವಾರ ಅಪರಾಹ್ನ ಆಕಸ್ಮಿಕವಾಗಿ ಬೆಂಕಿ ಹಿಡಿದು ಹೊತ್ತಿ ಉರಿದು ಸಂಪೂರ್ಣ ನಾಶವಾದ ಘಟನೆ ನಡೆದಿದೆ. ಇಲ್ಲಿನ ದಿ. ಕುಟ್ಟಿ ನಾಯ್ಕ ಎಂಬವರ ಪುತ್ರ ಬಟ್ಯ ನಾಯ್ಕ ಎಂಬವರ ಹೆಂಚು ಹಾಸಿದ ಮನೆಗೆ ಈ ರೀತಿ ಬೆಂಕಿ ಹಿಡಿದು ನಾಶವಾಗಿದೆ. ಬಟ್ಯ ನಾಯ್ಕ ಹಾಗೂ ಇವರ ಮಗನ ಇಬ್ಬರು ಪುಟಾಣಿ ಮಕ್ಕಳು ಮಾತ್ರವೇ ಮನೆಯೊಳಗಿದ್ದು ಅದೃಷ್ವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಮಧ್ಯಾಹ್ನ ಬಳಿಕ ಮನೆಯಲಿ ಸಾಕಿದ ದನದ ಹಾಲು ಕರೆದು ಸಮೀಪದ ಡೈರಿಗೆ ಕೊಡಲು ಇವರ ಮಗನ ಪತ್ನಿಯಾದ ನಳಿನಿ ತೆರಳಿದ್ದು ಅ ಬಳಿಕ ಅಲ್ಪ ಹೊತ್ತಿನಲ್ಲಿ ಮನೆಯ ಕೋನೆಯೊಂದರಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳದಲ್ಲಿದ್ದ ಬಟ್ಯ ನಾಯ್ಕ್ ತಿಳಿಸಿದ್ದಾರೆ. ತಕ್ಷಣ ಮಕ್ಕಳನ್ನು ಕರೆದುಕೊಂಡೋಗಿ ಸಮೀಪದಲ್ಲಿರುವವರಿಗೆ ವಿಷಯ ತಿಳಿಸುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಮರದ ಮಾಡನ್ನು ಸಂಪೂರ್ಣ ಅವರಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಊರವರು ಓಡೋಡಿ ಬಂದಿದ್ದರು. ಬೆಂಕಿಯನ್ನು ನಂದಿಸುವ ಪ್ರಯತ್ನದ ನಡುವೆ ಮನೆಯೊಳಗೆ ಇದ್ದ ಬೆಳೆ ಬಾಳುವ ನಗ ನಗದು ಸಹಿತ ಸ್ಥಳದ ರೇಕಾರ್ಡ್, ಗೋಡ್ರೆಜ್, ಟಿವಿ,ಫ್ರಿಡ್ಜ್ ಬೆಂಕಿಗೆ ಅಹುತಿಯಾಗಿತ್ತು. ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್‍ವೊಂದು ಬೆಂಕಿ ಹಿಡಿದು ಸುಟ್ಟು ರಟ್ಟಿತ್ತು. ಇದರ ರಭಸಕ್ಕೆ ಮನೆಯ ಗೋಡೆಗಳು ಒಡೆದು ಹೋಗಿದೆ. ಸ್ಥಳೀಯರು ಹರಸ ಸಾಹಸ ಪಟ್ಟು ಮನೆಯ ಅಡುಗೆ ಕೋನೆಯೊಳಗಿದ್ದ ಗ್ಯಾಸ್ ಸಿಲಿಂಡರ್‍ನ್ನು ಹೊರ ತೆಗೆದು ಬೆಂಕಿ ನಂದಿಸುವ ಕಾರ್ಯಕ್ಕೆ ತೊಡಗಿದ್ದರು. ತಕ್ಷಣ ಕಾಸರಗೋಡಿನಿಂದ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದ್ದರು. ಮನೆಯೊಳಗಿದ್ದ ಮನೆಯ ರೇಕಾರ್ಡ್, ಐಡೆಂಟಿ ಕಾರ್ಡ್ ಶಾಲಾ ಸರ್ಟಿಫಿಕೇಟ್ ಸಹಿತ ಚಿನ್ನ ಹಣ ಇನ್ನಿತರ ಬೆಲೆ ಬಾಳುವ ವಸ್ತುಗಳು ಮನೆ ಸಂಪೂರ್ಣ ಹೊತ್ತಿ ನಾಶವಾಗಿದೆ. ಮನೆಯ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬೇಕೆಂದು ಸಂಶಯಿಸಲಾಗಿದೆ.ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಸ್ಥಳೀಯವರೊಂದಿಗೆ ಸೇರಿಕೊಂಡು ಈ ಮನೆಯವರಿಗೆ ವಾಸಿಸಲು ತಾತ್ಕಲಿಕ ವಸತಿ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿದು ಬಂದಿದೆ.