ಕಾಸರಗೋಡು: ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭ ಮತದಾನದಲ್ಲಿ ಉಂಟಾಗಿರುವ ವಿಳಂಬ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ. ಕೆಲವು ಮತಗಟ್ಟೆಯೊಳಗೆ ಸಿಬ್ಬಂದಿಯ ನಿಧಾನ ಧೋರಣೆ ವಿಳಂಬಕ್ಕೆ ಕಾರಣವಾಗಿರುವುದಾಗಿ ದೂರುಗಳೆದ್ದಿದೆ.
ಕೆಲವು ಬೂತ್‍ಗಳಲ್ಲಿ ಫಸ್ಟ್ ಪೋಲಿಂಗ್ ಅಧಿಕಾರಿಯ ವಿಳಂಬ ನೀತಿ, ಎಲ್ಲ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವಂತಾಗಿತ್ತು. ಮತದಾರ ತನ್ನ ಗುರುತಿನ ಚೀಟಿಯೊಂದಿಗೆ ಮತಗಟ್ಟೆಯೊಳಗೆ ತೆರಳಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಿದ್ದರು. ಗುರುತಿನ ಚೀಟಿ ತಪಾಸಣೆಯೊಂದಿಗೆ ಬೆರಳಿಗೆ ಶಾಯಿ ಹಾಕಿ, ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬರಲು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಿರಂತರ ವಿಳಂಬವಾಗಿ ಸಾಗಲು ಕಾರಣವಾಗಿತ್ತು.
ಈ ಹಿಂದೆ ಬ್ಯಾಲೆಟ್ ಪೇಪರ್‍ನೊಂದಿಗೆ ನಡೆಯುತ್ತಿದ್ದ ಮತದಾನ ಪ್ರಕ್ರಿಯೆ ಗರಿಷ್ಠ ಒಂದುವರೆ ತಾಸಿಗಿತ ಹೆಚ್ಚು ವಿಳಂಬವಾಗುತ್ತಿರಲಿಲ್ಲ. ಇವಿಎಂ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ವಿಳಂಬ ಮತದಾರರಲ್ಲಿ ಸಹಜವಾಗಿ ಅಸಮಧಾನಕ್ಕೆ ಕಾರಣವಾಗುತ್ತಿದೆ. ಕಾಸರಗೋಡು ಜಿಲ್ಲೆಯ ಕೆಲವೊಂದು ಬೂತ್‍ಗಳಲ್ಲಿ ರಾತ್ರಿ 9ರ ವರೆಗೂ ಮತದಾನ ಪ್ರಕ್ರಿಯೆ ಮುಂದುವರಿದಿತ್ತು.
ಚುನಾವಣಾ ಪ್ರಕ್ರಿಯೆ ಬಹುತೇಕ ಸಿಬ್ಬಂದಿಯಲ್ಲಿ ಭಯದ ವಾತಾವರಣ ಉಂಟಾಗುತ್ತಿದೆ. ಚುನಾವಣಾ ಸಿಬ್ಬಂದಿಗೆ ಚುನಾವಣಾ ಆಯೋಗ ನಡೆಸುವ ತರಬೇತಿ ಪ್ರಕ್ರಿಯೆಯಲ್ಲಿ ನೀಡುವ ಮಾರ್ಗದರ್ಶನಗಳನ್ನು ಚಾಚೂತಪ್ಪದೆ ಪಾಲಿಸಲು ಮುಂದಾದಾಗ ಸಹಜವಾಗಿ ವಿಳಂಬವುಂಟಾಗುತ್ತದೆ. ಪೋಲಿಂಗ್ ಏಜೆಂಟ್‍ಗಳ ಹಾಗೂ ಮತದಾರರ ನಿರಂತರ ಒತ್ತಡದ ನಡುವೆ ಕೆಲವೊಂದು ಬೂತ್‍ಗಳಲ್ಲಿ ಮತದಾನ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವಂತಾಗಿತ್ತು.
ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಸಾಗಿತ್ತು. ಬಿಸಿಲಿನ ಬೇಗೆ ಒಂದೆಡೆಯಾದರೆ, ಸರತಿ ಸಾಲಲ್ಲಿ ತಾಸುಗಳ ಕಾಲ ಕಳೆಯಬೇಕಾಗಿ ಬಂದಿರುವುದರಿಂದ ಮತದಾರರಲ್ಲಿ ಹತಾಶೆ ಮನೋಭಾವ ಮೂಡುವಂತಾಗಿತ್ತು. ಮತದಾನ ವಿಳಂಬವಾಗರುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಲಭಿಸಿದ್ದು, ಆಯೋಗ ಈ ಬಗ್ಗೆ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಂದ ವರದಿ ಕೇಳುವ ಸಾಧ್ಯತೆಯಿದೆ.