ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯಲ್ಲಿ ಶಾಖಾಘಾತದಿಂದ (ಬಿಸಿಲಿನ ತಾಪ) ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಎಡಪ್ಪುಳ್ಳಿ ಗ್ರಾಮದ ಕಾಲುವೆಯಲ್ಲಿ 90 ವರ್ಷದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ವಾರ, ಜಿಲ್ಲೆಯಲ್ಲಿ ಶಾಖಾಘಾತದ ಸುಟ್ಟ ಗಾಯಗಳಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು ಎಂದು ಅವರು ಹೇಳಿದ್ದಾರೆ.
12 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದ ಎಚ್ಚರಿಕೆ:
ತೀವ್ರ ಬಿಸಿಲಿನ ತಾಪಕ್ಕೆ ಕೇರಳ ತತ್ತರಿಸುತ್ತಿದ್ದು, ಮುಂದಿನ ಐದು ದಿನಗಳು 12 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆಯು ನೀಡಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಜನರು ಮನೆಯಿಂದ ಹೊರಬರದಂತೆ ಸಲಹೆ ನೀಡಲಾಗಿದೆ.
ಕೊಲ್ಲಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಮತ್ತು ಕೊಲ್ಲಂನಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ದಿನನಿತ್ಯವು ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿಗಳನ್ನು ಒಂದು ವಾರದವರೆಗೆ ತೆರೆಯದಿರಲು ನಿರ್ಧರಿಸಿದೆ.