ಕಣ್ಣೂರು: ಕಣ್ಣೂರಿನಲ್ಲಿ ತೀವ್ರ ಬಿಸಿಲಿನ ಶಾಖದಿಂದ ಟೈಲರ್ ಶಾಪ್ ಮಾಲೀಕನ ಎರಡೂ ಕಾಲುಗಳು ಸುಟ್ಟು ತೀವ್ರ ಸಮಸ್ಯಾತ್ಮಕವಾದ ಘಟನೆ ನಡೆದಿದೆ. ಚೆರುಪುಳ ತಿರುಮೇನಿ ಎಂಬಲ್ಲಿ ಈ ಘಟನೆ ನಡೆದಿದೆ. ಬಿಸಿಲಿನ ಮಧ್ಯೆ ಬಸ್ಸಿನಿಂದ ಇಳಿದು ಬರಿಗಾಲಿನಲ್ಲಿ ಅಂಗಡಿಗೆ ತೆರಳಿದ್ದ ಕರುವಾಂಚಲ್ ಪಳ್ಳಿಕಾವಲ ನಿವಾಸಿ ಎಂ.ಡಿ.ರಾಮಚಂದ್ರನ್ ಅವರ ಕಾಲುಗಳು ತೀವ್ರ ಸ್ವರೂಪದಲ್ಲಿ ಸುಟ್ಟುಹೋಗಿದೆ.
ಚೆರುಪುಳ ತಿರುಮೇನಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿರುವ ರಾಮಚಂದ್ರನ್ ಬಸ್ಸಿನಿಂದ ಇಳಿದು ಬರಿಗಾಲಿನಲ್ಲಿ ಸುಮಾರು 100 ಮೀಟರ್ ನಡೆದು ತೆರಳಿದ್ದು ಬಿಸಿಲಿನ ಆಘಾತಕ್ಕೆ ಪಾದದ ಕೆಳಭಾಗದ ಚರ್ಮ ಸುಟ್ಟು ಕರಕಲಾದಂತಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸುಟ್ಟ ಚರ್ಮವನ್ನು ತೆಗೆದುಹಾಕಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಮಚಂದ್ರನ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಬಿಸಿಲಾಘಾತ ಸಂಭವಿಸುವ ಸಂಭವವಿದ್ದು, ಜನತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತಗಳು ಪದೇಪದೇ ಮಾಹಿತಿ ನೀಡುತ್ತಿವೆ.