ನವದೆಹಲಿ: 26 ಸಾವಿರ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳಲ್ಲಿ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್,
ಸಿಬಿಐ ತಿನಿಖೆಗೊಳಪಡಿಸುವಂತೆ ಆದೇಶಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠ, ಸಿಬಿಐ ತನಿಖೆಗೆ ತಡೆ ನೀಡಿದ್ದು, ಮೇ 6 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
"ರಾಜ್ಯ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ(ಕೇಂದ್ರ ತನಿಖಾ ದಳ) ಹೆಚ್ಚಿನ ತನಿಖೆಯನ್ನು ಕೈಗೊಳ್ಳುತ್ತದೆ ಎಂದು ಹೇಳುವ ನಿರ್ದೇಶನವನ್ನು ನಾವು ತಡೆಹಿಡಿಯುತ್ತೇವೆ" ಎಂದು ಸುಪ್ರೀಂ ಪೀಠ ಹೇಳಿದೆ.
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಶಬ್ಬರ್ ರಾಶೀದಿ ಅವರ ವಿಭಾಗೀಯ ಪೀಠವು ಆಯ್ಕೆಯಾದ ಅಭ್ಯರ್ಥಿಗಳು ಮುಂದಿನ ನಾಲ್ಕು ವಾರಗಳಲ್ಲಿ ಅವರು ಪಡೆದ ಸಂಪೂರ್ಣ ವೇತನವನ್ನು ಶೇ 12ರ ವಾರ್ಷಿಕ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿದೆ.