ಕನ್ಣೂರು: ಕನ್ಣೂರು ಜಿಲ್ಲೆಯ ಕೊಟ್ಟಾಳಿಕಾವು ಅಂಚೆಕಚೇರಿ ಸನಿಹದ ಮನೆಯೊಳಗೆ ತಾಯಿ ಮತ್ತು ಪುತ್ರಿಯ ಮೃತದೇಹ ಪತ್ತೆಯಾಗಿದೆ. ದಿ. ವಿಶ್ವನಾಥ ಶೆಣೈ ಅವರ ಪತ್ನಿ ಸುನಂದಾ ವಿ.ಶೆಣೈ(78)ಹಾಗೂ ಇವರ ಪುತ್ರಿ ದೀಪಾ ವಿ.ಶೆಣೈ(44)ಮೃತಪಟ್ಟವರು. ಮುರು ದಿವಸಗಳ ಹಿಂದೆ ಸಾವು ಸಂಭವಿಸಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸುನಂದ ಅವರ ಮೃತದೇಹ ಡೈನಿಂಗ್ ಹಾಲ್‍ನಲ್ಲಿ ಹಾಗೂ ಪುತ್ರಿ ದೀಪಾ ಅವರ ಮೃತದೇಹ ಅಡುಗೆ ಕೊಠಡಿಯಲ್ಲೂ ಪತ್ತೆಯಾಗಿದೆ. ದೀಪಾ ಅವಿವಾಹಿತೆಯಾಗಿದ್ದರು. ಮೂಲತ: ಮಂಗಳೂರು ನಿವಾಸಿಗಳಾಗಿರುವ ಇವರು, ಹತ್ತು ವರ್ಷಗಳ ಹಿಂದೆ ಕೊಟ್ಟಾಳಿಗೆ ಆಗಮಿಸಿದ್ದರು. ಸ್ಥಳೀಯರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ. ಸುನಂದಾ ಅವರಿಗೆ ದೀಪಾ ಹೊರತಾಗಿ ಇನ್ನೊಬ್ಬಾಕೆ ಪುತ್ರಿಯಿದ್ದು, ಈಕೆ ಕಕ್ಕಾಡ್‍ನಲ್ಲಿ ನೆಲೆಸಿದ್ದಾರೆನ್ನಲಾಗಿದೆ.
ಮೂರು ದಿವಸದ ಹಿಂದೆ ಇವರು ಮತದಾನಕ್ಕಾಗಿ ಮನೆಯಿಂದ ಹೊರಗೆ ತೆರಳಿದ್ದು, ನಂತರ ಇವರನ್ನು ಆಸುಪಾಸಿನವರು ಯಾರೂ ಕಂಡಿರಲಿಲ್ಲ. ಇವರ ಮನೆ ಮುಚ್ಚಿದ ಸ್ಥಿತಿಯಲ್ಲಿತ್ತು. ಕಿಟಿಕಿಯಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನೆರೆಮನೆಯವರು ನೋಡಿದಾಗ ಮೃತದೇಹ ಪತ್ತೆಯಾಗಿತ್ತು. ಫ್ಯಾನ್, ಲೈಟುಗಳು ಆನ್ ಆಗಿತ್ತು. ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಮಿಸಿ ಮೃತದೇಹ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.