ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಒಂದು ಹೆಚ್ಚುವರಿ ಮತವನ್ನು ತೋರಿಸಿವೆ ಎಂಬ ಆರೋಪ ಸುಳ್ಳು ಎಂದು ಕೇಂದ್ರ ಚುನಾವಣಾ ಆಯೋಗ, ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಒಂದು ಹೆಚ್ಚುವರಿ ಮತವನ್ನು ತೋರಿಸಿವೆ ಎಂಬ ಆರೋಪ ಸುಳ್ಳು ಎಂದು ಕೇಂದ್ರ ಚುನಾವಣಾ ಆಯೋಗ, ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇವಿಎಂ ಮೂಲಕ ಚಲಾಯಿಸಲಾದ ಮತಗಳನ್ನು ವಿವಿ-ಪ್ಯಾಟ್ (ಮತದಾನ ದೃಢೀಕರಣ ರಸೀದಿ ಯಂತ್ರ) ರಸೀದಿ ಮೂಲಕ ತಾಳೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
'ಅಣಕು ಮತದಾನದ ವೇಳೆ ಒಂದು ಹೆಚ್ಚುವರಿ ಮತವನ್ನು ತೋರಿಸಿದೆ ಎಂಬ ವರದಿ ಸುಳ್ಳು. ಜಿಲ್ಲಾಧಿಕಾರಿ ಅವರೂ ಈ ಬಗ್ಗೆ ಪರಿಶೀಲಿಸಿದ್ದು, ಆರೋಪ ಸುಳ್ಳು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ' ಎಂದು ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರಿದ್ದ ಪೀಠಕ್ಕೆ ತಿಳಿಸಿದರು.
ಅರ್ಜಿದಾರ ಎನ್‌ಜಿಒ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಅಣಕು ಮತದಾನದ ವೇಳೆ ಇವಿಎಂಗಳು ಒಂದು ಹೆಚ್ಚುವರಿ ಮತವನ್ನು ತೋರಿಸುತ್ತಿರುವ ಬಗ್ಗೆ ವರದಿಗಳಿವೆ ಎಂದು ಪೀಠಕ್ಕೆ ತಿಳಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರಿಗೆ ಪೀಠವು ಸೂಚಿಸಿತು.