ವೆಲ್ಲೂರು/ಮೆಟ್ಟುಪಾಳ್ಯಂ: ಕಚ್ಚತೀವು ಮತ್ತು 'ಶಕ್ತಿ' ಹೆಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಡಿಎಂಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದರು.
ಕಚ್ಚತೀವು ದ್ವೀಪದ ಸಮಸ್ಯೆ ಕುರಿತು ಈ ಎರಡೂ ಪಕ್ಷಗಳು ದೇಶವನ್ನು ಕತ್ತಲೆಯಲ್ಲಿ ಇರಿಸಿವೆ ಎಂದು ಆರೋಪಿಸಿದ ಅವರು, ಡಿಎಂಕೆಯು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪುನರುಚ್ಚರಿಸಿದರು.
ಇದೇ 19ರಂದು ತಮಿಳುನಾಡಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಪ್ರಯುಕ್ತ ಅವರು ವೆಲ್ಲೂರು ಮತ್ತು ಮೆಟ್ಟುಪಾಳ್ಯಂನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಭ್ರಷ್ಟಾಚಾರ ವಿಷಯದಲ್ಲಿ ಡಿಎಂಕೆ ಮೊದಲ ಹಕ್ಕುಸ್ವಾಮ್ಯ ಹೊಂದಿದೆ. ಕುಟುಂಬ ಕೇಂದ್ರಿತ ಈ ಪಕ್ಷವು ತಮಿಳುನಾಡನ್ನು ಲೂಟಿ ಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
ಡಿಎಂಕೆ 'ಕುಟುಂಬ ಕಂಪನಿ'ಯಾಗಿದ್ದು, ತನ್ನ ಹಳೆಯ ಮನಸ್ಥಿತಿಯಿಂದ ರಾಜ್ಯದ ಯುವ ಜನರ ಪ್ರಗತಿಯನ್ನು ತಡೆಯುತ್ತಿದೆ. ಅದು ಜನರನ್ನು ಭಾಷೆ, ಪ್ರದೇಶ, ನಂಬಿಕೆ ಮತ್ತು ಜಾತಿಯ ಮೇಲೆ ವಿಭಜಿಸುತ್ತಿದೆ. ಇದು ಜನರಿಗೆ ಗೊತ್ತಾದ ದಿನ ಅವರಿಗೆ ಒಂದು ಮತವೂ ಬರುವುದಿಲ್ಲ ಎಂಬುದು ಡಿಎಂಕೆಗೆ ಗೊತ್ತಿದೆ ಎಂದು ಅವರು ಹೇಳಿದರು.
ಯಾವ ಸಂಪುಟ ಸಭೆಯಲ್ಲಿ ನಿರ್ಧಾರಿಸಿದ್ದೀರಿ: ಕಚ್ಚತೀವು ದ್ವೀಪವನ್ನು 1974ರಲ್ಲಿ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಾಗ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದವು. ಇಂತಹ ನಿರ್ಧಾರವನ್ನು ಯಾವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಮತ್ತು ಅದರಿಂದ ಯಾರಿಗೆ ಪ್ರಯೋಜನವಾಯಿತು ಎಂದು ಪ್ರಶ್ನಿಸಿದ ಮೋದಿ, ಇವುಗಳಿಗೆ ಕಾಂಗ್ರೆಸ್ ಉತ್ತರಿಸಿಲ್ಲ ಎಂದರು.
ಆ ದ್ವೀಪವನ್ನು ಬಿಟ್ಟುಕೊಟ್ಟ ಬಳಿಕ ತಮಿಳುನಾಡಿನ ಭಾರತೀಯ ಮೀನುಗಾರರನ್ನು ಬಂಧಿಸಲಾಯಿತು, ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ನಕಲಿ ಸಹಾನುಭೂತಿ ತೋರಿಸುತ್ತಿವೆ ಎಂದು ಮೋದಿ ಆರೋಪಿಸಿದರು. ಎನ್‌ಡಿಎ ಸರ್ಕಾರವು, ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಮೀನುಗಾರರನ್ನು ರಕ್ಷಿಸಿದೆ ಎಂದರು.
ರಾಹುಲ್ ವಿರುದ್ಧ ಟೀಕೆ: 'ರಾಜಕುಮಾರ ರಾಹುಲ್ ಗಾಂಧಿ ಅವರು ಹಿಂದೂ ನಂಬಿಕೆಯ ಶಕ್ತಿಯನ್ನು ನಾಶಪಡಿಸುವ ಮಾತನಾಡಿದ್ದಾರೆ' ಎಂದೂ ಪ್ರಧಾನಿ ಟೀಕಿಸಿದರು. 'ಡಿಎಂಕೆ ಮನಸ್ಥಿತಿಯೂ ಇದೇ ಆಗಿದೆ. ಅವರೂ ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು (ಅಯೋಧ್ಯೆಯಲ್ಲಿ) ಬಹಿಷ್ಕರಿಸಿದ್ದಾರೆ' ಎಂದು ಟೀಕಿಸಿದರು.
'ಇಂಡಿಯಾ' ಮೈತ್ರಿಕೂಟದವರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಜಯಲಲಿತಾ ಅವರು ಬದುಕಿದ್ದಾಗ ಡಿಎಂಕೆ ಅವರನ್ನು ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ಹೇಳಿದರು.
'ಬಿಜೆಪಿ ಮತ್ತು ಎನ್‌ಡಿಎಗೆ ದೊರೆಯುವ ನಿಮ್ಮ ಆಶೀರ್ವಾದವು ಸನಾತನ ಶಕ್ತಿ ಮತ್ತು ಮಹಿಳೆಯರ ಗೌರವವನ್ನು ಖಚಿತಪಡಿಸುತ್ತದೆ' ಎಂದರು.
ಮರಳು ಅಕ್ರಮ ಸಾಗಣೆದಾರರಿಂದ ತಮಿಳುನಾಡಿಗೆ ₹4,600 ಕೋಟಿ ನಷ್ಟವಾಗಿರುವುದು ಗೊತ್ತಾಗಿದೆ. ಡಿಎಂಕೆಯು ರಾಜ್ಯದಲ್ಲಿ ಯುವ ಸಮುದಾಯದ ಭವಿಷ್ಯ ರೂಪಿಸುವ ಬದಲಿಗೆ ಮಾದಕ ವ್ಯಸನಿಗಳನ್ನಾಗಿಸುತ್ತಿದೆ. ಇತ್ತೀಚೆಗೆ ಎನ್‌ಸಿಬಿ ಬಂಧಿಸಿದ ಮಾದಕ ವ್ಯಸನಿಗಳು ಯಾವ ಕುಟುಂಬದ ಜತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಾಗಬೇಕಿದ್ದು, ತಮಿಳುನಾಡಿನ ಜನರು ಉತ್ತರ ಹುಡುಕುತ್ತಾರೆ ಎಂದು ಪ್ರಧಾನಿ ಹೇಳಿದರು.
ಅಂದಾಜು ₹2,000 ಕೋಟಿಗೂ ಹೆಚ್ಚು ಮೌಲ್ಯದ 3,500 ಕೆ.ಜಿ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕಳೆದ ತಿಂಗಳು ಜಾಫರ್ ಸಾದಿಕ್ ಎಂಬುವರನ್ನು ಎನ್‌ಸಿಬಿ ಬಂಧಿಸಿತ್ತು. ಅವರು ಡಿಎಂಕೆಯ ಉಚ್ಚಾಟಿತ ಕಾರ್ಯಕರ್ತ. ಮೋದಿ ಅವರು ಈ ಪ್ರಕರಣವನ್ನೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.