ಕೃಷ್ಣಗಿರಿ: ಡಿಎಂಕೆ ಪಕ್ಷವು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಹೊರತುಪಡಿಸಿ ತಮಿಳುನಾಡಿಗೆ ಏನು ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.
ಕೃಷ್ಣಗಿರಿ: ಡಿಎಂಕೆ ಪಕ್ಷವು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಹೊರತುಪಡಿಸಿ ತಮಿಳುನಾಡಿಗೆ ಏನು ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿ ಆಧರಿತ ಆಡಳಿತ ನೀಡಲು ಡಿಎಂಕೆ ಪಕ್ಷವು ವಿಫಲವಾಗಿದೆ ಎಂದು ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಕೇವಲ ಅಧಿಕಾರ ಹಿಡಿಯುವುದೇ ಡಿಎಂಕೆ ಹಾಗೂ ಕಾಂಗ್ರೆಸ್‌ನ ಉದ್ದೇಶವಾಗಿದೆ. ಡಿಎಂಕೆ ಪಕ್ಷ ತಮಿಳುನಾಡಿಗೆ ಏನು ಮಾಡಿದೆ ಎಂದು ಕೇಳಲು ಇಚ್ಛಿಸುವೆ. ಬಿಜೆಪಿ ದೇಶ ಮೊದಲು ಎಂದು ಹೇಳಿದರೆ, ಡಿಎಂಕೆ ಪಕ್ಷದವರು ಕುಟುಂಬ ಮೊದಲು ಎಂದು ಉಚ್ಚರಿಸುತ್ತಾರೆ ಎಂದು ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ.
ತಮಿಳುನಾಡನ್ನು ಡಿಎಂಕೆ ಅಥವಾ ಕಾಂಗ್ರೆಸ್ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದೇ?, ಡಿಎಂಕೆ ಎಂದಾದರೂ ತನ್ನ ಕುಟುಂಬವನ್ನು ಮೀರಿ ರಾಜ್ಯದ ಬಗ್ಗೆ ಯೋಚಿಸಬಹುದೇ?, ಇಂಡಿಯಾ ಮೈತ್ರಿಕೂಟವು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬಹುದೇ?, ಚುನಾವಣೆಯ ನಂತರ ಈ ಮೈತ್ರಿ ಹೀಗೆ ಉಳಿಯಬಹುದೇ ಎಂಬ ಪ್ರಶ್ನೆಗಳಿಗೆ 'ಇಲ್ಲ' ಎಂಬ ಉತ್ತರವೇ ಸೂಕ್ತವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
'ಸಿ. ರಾಜಗೋಪಾಲಾಚಾರಿ, ಕೆ. ಕಾಮರಾಜ್ ಹಾಗೂ ಎಂ.ಜಿ ರಾಮಚಂದ್ರನ್ ಅವರಂತಹ ನಾಯಕರಿಂದ ಸ್ಫೂರ್ತಿ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರು ದುರ್ಬಲ ವರ್ಗಗಳ ಸಬಲೀಕರಣದ ನಿಟ್ಟಿನಲ್ಲಿ ಅವರ ಹಾದಿಯನ್ನೇ (ನಾಯಕರ) ಅನುಸರಿಸುತ್ತಿದ್ದಾರೆ' ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.