ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್‌ಲಾಕ್ ಮಾಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮನವಿಯನ್ನು ಟೆಕ್ ದೈತ್ಯ 'ಆಯಪಲ್' ಕಂಪನಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಬಳಕೆದಾರರ ಗೌಪ್ಯತೆ ಕಾರಣಗಳನ್ನು ನೀಡಿರುವ ಆಯಪಲ್, 'ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್‌ಲಾಕ್ ಮಾಡಲು ಮತ್ತು ಇ.ಡಿ ತನಿಖೆಗೆ ಸಹಕಾರ ನೀಡಲು ನಿರಾಕರಿಸಿದೆ' ಎಂದು ತಿಳಿದುಬಂದಿದೆ.
'ಪಾಸ್‌ವರ್ಡ್ ಬಳಸಿ ಬಳಕೆದಾರರು ಮಾತ್ರವೇ ಡೇಟಾವನ್ನು ಪರಿಶೀಲಿಸಬಹುದು ಎಂದು ಆಯಪಲ್ ಕಂಪನಿ ಪ್ರತಿಪಾದಿಸಿದೆ' ಎಂದು 'ಪ್ರಿಂಟ್' ವರದಿ ಮಾಡಿದೆ.
ಯಾವುದೇ ಲಿಖಿತ ಸಂವಹನವಿಲ್ಲದಿದ್ದರೂ ಕೂಡ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್‌ಲಾಕ್ ಮಾಡಲು ಸಹಾಯ ಮಾಡುವಂತೆ ಇ.ಡಿ ಅಧಿಕಾರಿಗಳು ಆಯಪಲ್‌ಗೆ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಕೇಜ್ರಿವಾಲ್ ಅವರ ಫೋನ್ ಓಪನ್ ಮಾಡಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಇದು ಸಾಧ್ಯವಾಗದ ಕಾರಣಕ್ಕೆ ಅಧಿಕಾರಿಗಳು ಕಂಪನಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಜಾರಿ ನಿರ್ದೇಶನಾಲಯ (ಇ.ಡಿ) ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ಲೋಕಸಭಾ ಚುನಾವಣಾ ತಂತ್ರಗಾರಿಕೆಯ ವಿವರಗಳನ್ನು ಪಡೆಯಲು ಬಯಸುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಈಚೆಗೆ ಆರೋಪಿಸಿದ್ದರು.
'ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಪರಿಶೀಲಿಸಲು ಇ.ಡಿ ಒತ್ತಾಯಿಸುತ್ತಿದೆ. ಆದರೆ 2021-22ರಲ್ಲಿ ಅಬಕಾರಿ ನೀತಿ ಜಾರಿಗೆ ಬಂದಿದ್ದಾಗ ಅವರ ಬಳಿ ಈ ಫೋನ್ ಇರಲಿಲ್ಲ. ಇದು ಕೆಲವೇ ತಿಂಗಳು ಹಳೆಯದ್ದು. ಇದರಿಂದ ಇ.ಡಿ, ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದೆ ಎಂಬುದು ಸಾಬೀತುಗೊಂಡಿದೆ' ಎಂದೂ ದೂರಿದ್ದರು.