ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಹೈಕೋರ್ಟ್ ಚಾಟಿ ಬೀಸಿದ್ದು, ಸಿಎಂ ಹುದ್ದೆ ಅಲಂಕಾರಿಕ ಅಲ್ಲ.. ಅವರು ದಿನದ 24 ಗಂಟೆಯೂ ಜನರಿಗೆ ಲಭ್ಯರಿರಬೇಕು ಎಂದು ಹೇಳಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ಅರವಿಂದ್ ಕೇಜ್ರಿವಾಲ್ ಕೂಡಲೇ ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕು ಎಂಬ ಬಿಜೆಪಿ ನಾಯಕರ ಆಗ್ರಹದ ನಡುವೆಯೇ ಇತ್ತ ದೆಹಲಿ ಹೈಕೋರ್ಟ್ ಕೂಡ ಕೇಜ್ರಿವಾಲ್ ನಡೆ ವಿರುದ್ಧ ಚಾಟಿ ಬೀಸಿದ್ದು, ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿತು.
ನೂತನ ಶೈಕ್ಷಣಿಕ ವರ್ಷ ಆರಂಭವಾದರೂ ಶಾಲೆಗಳಿಗೆ ಶೈಕ್ಷಣಿಕ ಉಪಕರಣಗಳು ಸೇರಿ ಹಲವು ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬುದಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದು, 'ಮುಖ್ಯಮಂತ್ರಿ ಸ್ಥಾನ ಎಂಬುದು ಔಪಚಾರಿಕ ಅಲ್ಲ. ಸಿಎಂ ಆದವರು 24/7 ಜನರಿಗೆ ಲಭ್ಯ ಇರಬೇಕು.
ಯಾವುದೇ ರಾಜ್ಯದ ಮುಖ್ಯಮಂತ್ರಿಯಾದವರು ಜನರಿಗೆ ಲಭ್ಯ ಇರಬೇಕು. ಅದರಲ್ಲೂ, ದೆಹಲಿಯಂತಹ ದೊಡ್ಡ ನಗರದಲ್ಲಿ ಮುಖ್ಯಮಂತ್ರಿಯಾದವರು ಯಾವಾಗಲೂ ಜನರಿಗೆ ಲಭ್ಯ ಇರಬೇಕು ಎಂದು ಹೇಳಿತು.
“ಮುಖ್ಯಮಂತ್ರಿ ಹುದ್ದೆ ಎಂಬುದು ಔಪಚಾರಿಕ ಅಲ್ಲ. ಪ್ರವಾಹ, ಅಗ್ನಿ ದುರಂತ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ಜನರಿಗೆ ಲಭ್ಯ ಇರಬೇಕು. ಬಂಧನದ ಬಳಿಕ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡುವುದು, ಬಿಡುವುದು ಅವರ ವೈಯಕ್ತಿಕ ತೀರ್ಮಾನ. ಆದರೆ, ಸಿಎಂ ಸ್ಥಾನದಲ್ಲಿದ್ದವರು ಜನರಿಗೆ ಸಿಗುವಂತಿರಬೇಕು. ಕ್ಷಿಪ್ರವಾಗಿ ತೀರ್ಮಾನ ತೆಗೆದುಕೊಳ್ಳುವಂತಿರಬೇಕು” ಎಂದು ಹೇಳಿದೆ.