ವಿಶ್ವಸಂಸ್ಥೆ: ಭಾರತದಲ್ಲಿ ಡಿಜಿಟಲೀಕರಣವನ್ನು ಹೊಗಳಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್, ಅದು ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆ ಮತ್ತು ಬಡತನ ತಗ್ಗಿಸಲು ನೆರವಾಗಿದೆ ಎಂದು ಹೇಳಿದ್ದಾರೆ.
ಇದರಿಂದ ದೇಶಕ್ಕೆ ತುಲನಾತ್ಮಕವಾಗಿ ಪ್ರಯೋಜನವಾಗಿದ್ದು, ಈ ಪಾಠವನ್ನು ಜಾಗತಿಕ ಸಮುದಾಯದ ಜೊತೆ ಹಂಚಿಕೊಳ್ಳಬಹುದಾಗಿದೆ ಎಂದೂ ಅವರು ಹೇಳಿದ್ದಾರೆ.
'ನಾನು ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ, ಪ್ರತಿ ಬಾರಿ ಭಾರತವನ್ನು ಅಸಾಧಾರಣ ಭಾರತವಾಗಿ(Incredibli India)ನೋಡಿದ್ದೇನೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಲ್ಲಿ ಡಿಜಿಟಲೀಕರಣದ ಅಭಿವೃದ್ಧಿ' ಎಂದು ಅವರು ಹೇಳಿದ್ದಾರೆ.
ಈ ವರ್ಷ ಜನವರಿ 22ರಿಂದ 26ರವರೆಗೆ ಫ್ರಾನ್ಸಿಸ್ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಜೈಪುರ ಮತ್ತು ಮುಂಬೈಗೂ ಭೇಟಿ ನೀಡಿದ್ದರು.
ಈ ಭೇಟಿ ವೇಳೆ ಸುಸ್ಥಿರ ಅಭಿವೃದ್ಧಿ, ಬಹುಪಕ್ಷೀಯತೆ, ಡಿಜಿಟಲ್ ಸರ್ಕಾರಿ ಮೂಲಸೌಕರ್ಯ ಮುಂತಾದ ವಿಷಯಗಳ ಕುರಿತಂತೆ ಸರ್ಕಾರಿ ಅಧಿಕಾರಿಗಳು, ನಾಗರಿಕರು ಮತ್ತು ಬುದ್ಧಿಜೀವಿಗಳ ಜೊತೆ ಸಂವಾದ ನಡೆಸಿದ್ದರು.
ಬಡತನ ತಗ್ಗಿಸುವುದು ಮತ್ತು ಲಕ್ಷಾಂತರ ಜನರನ್ನು ಆರ್ಥಿಕ ವ್ಯವಸ್ಥೆಯ ಅಡಿಯಲ್ಲಿ ತಂದಿರುವ ಭಾರತದ ಡಿಜಿಟಲೀಕರಣದ ಮಾದರಿಯನ್ನು ಅವರು ಶ್ಲಾಘಿಸಿದ್ಧಾರೆ. ಡಿಜಿಟಲೀಕರಣ ಒಂದು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದದ್ದು, ಏಕೆಂದರೆ ಇದು ಉತ್ಪಾದಕತೆ ಹೆಚ್ಚಿಸುವ ಜೊತೆಗೆ ವೆಚ್ಚ ತಗ್ಗಿಸುತ್ತದೆ. ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಜೊತೆಗೆ ಅಗ್ಗದ ದರದಲ್ಲಿ ವಸ್ತುಗಳ ಲಭ್ಯತೆಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಉದ್ದಗಲಕ್ಕೂ ಮಹಿಳೆಯರು, ರೈತರಿಗೆ ಡಿಜಿಟಲೀಕರಣ ನೆರವಾಗಿದೆ. ತಮ್ಮ ಮನೆಗಳು ಮತ್ತು ತೋಟಗಳಲ್ಲೇ ಕೆಲಸ ಮಾಡಿಕೊಂಡು ಬ್ಯಾಂಕ್ ಸಂಬಂಧಿತ ವಹಿವಾಟು, ಡಿಜಿಟಲ್ ಪಾವತಿಗಳನ್ನು ಮಾಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
'ಇವೆಲ್ಲವೂ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಸ್ಪರ್ಧಾತ್ಕದ ಹಂತಕ್ಕೆ ಕೊಂಡೊಯ್ದಿವೆ. ಡಿಜಿಟಲೀಕರಣವು ಭಾರತಕ್ಕೆ ತುಲನಾತ್ಮಕವಾಗಿ ಪ್ರಯೋಜನವಾಗಿದೆ. ಈ ಪಾಠವನ್ನು ಜಾಗತಿಕ ಸಮುದಾಯದ ಜೊತೆ ಹಂಚಿಕೊಳ್ಳಬಹುದಾಗಿದೆ' ಎಂದು ಅವರು ಹೇಳಿದ್ದಾರೆ.
ಮೂಲ ಸೌಕರ್ಯ ಕ್ಷೇತ್ರದಲ್ಲಿ ಭಾರತ ಮಾಡಿರುವ ಅಗಾಧ ಹೂಡಿಕೆಯನ್ನು ಕಂಡು ಚಕಿತನಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಮೂಲ ಸೌಕರ್ಯ ಅಭಿವೃದ್ಧಿಯೂ ಆರ್ಥಿಕ ಚಟುವಟಿಕೆಯ ಒಂದು ಭಾಗ. ಇದರಿಂದ ಅಗತ್ಯ ಸಾಮಗ್ರಿಗಳ ಬೇಡಿಕೆ ಹೆಚ್ಚಳ, ಉದ್ಯೋಗವನ್ನು ಸೃಷ್ಟಿಯಾಗುವುದರಿಂದ ಆರ್ಥಿಕತೆಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.