ಇಡುಕ್ಕಿ: ಮತದಾನ ಪ್ರತೀ ನಾಗರಿಕನ ಹಕ್ಕು.. ಅದನ್ನು ಸಾಧಿಸಲು ಚುನಾವಣಾ ಅಧಿಕಾರಿಗಳು ಒಂದೇ ಒಂದು ಮತ ಹಾಕಿಸಲು ಕಾಡಿನಲ್ಲಿ ಬರೊಬ್ಬರಿ 18 ಕಿಮೀ ನಡೆದಿದ್ದು ಆ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ... ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಈ ಬಾರಿ ಚುನಾವಣಾ ಆಯೋಗ ಕೆಲ ವೃದ್ಧ, ಅಸಕ್ತ, ನಡೆಯಲು ಬಾರದ ಮತದಾರರಿಗೆ ಮನೆಯಿಂದಲೇ ವೋಟು ಹಾಕುವ ಅವಕಾಶವನ್ನು ಕಲ್ಪಿಸಿತ್ತು. ಅದರಂತೆ ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ 92 ವರ್ಷದ ವೃದ್ಧರೊಬ್ಬರಿಗಾಗಿ ಚುನಾವಣಾ ಸಿಬ್ಬಂದಿ ಬರೋಬ್ಬರಿ 18 ಕಿ.ಮೀ. ಕಾಡು ದಾರಿಯಲ್ಲಿ ನಡೆದಿದ್ದಾರೆ.
ಇಡುಕ್ಕಿ ಲೋಕಸಭಾ ಕ್ಷೇತ್ರದ ಹಿರಿಯ ನಾಗರಿಕ ಮತದಾರರಾದ ಶಿವಲಿಂಗಂ ಅನಾರೋಗ್ಯದಿಂದ ಹಾಸಿಗೆ ಹಾಸಿಗೆ ಹಿಡಿದಿದ್ದಾರೆ. ಆದರೂ ತಮ್ಮ ಹಕ್ಕನ್ನು ಚಲಾಯಿಸಬೇಕೆಂಬ ಮಹದಾಸೆ ಹೊಂದಿದ್ದರು. ಇಡುಕ್ಕಿ ಜಿಲ್ಲೆಯ ಎಡಮಲಕ್ಕುಡಿ ಎಂಬ ಬುಡಕಟ್ಟು ಗ್ರಾಮದಲ್ಲಿ ವಾಸಿಸುತ್ತಿರುವ ಶಿವಲಿಂಗಂ ಅವರ ಮತದಾನಕ್ಕಾಗಿ ಚುನಾವಣಾ ಸಿಬ್ಬಂದಿ ದುರ್ಗಮ ಕಾಡಿನಲ್ಲಿ ಸುಮಾರು 18 ಕಿ.ಮೀ. ನಡೆದಿದ್ದಾರೆ.
ಚುನಾವಣಾ ಅಧಿಕಾರಿಗಳ ಹರಸಾಹಸ
ಚುನಾವಣಾ ಸಿಬ್ಬಂದಿ ಶಿವಲಿಂಗಂ ಅವರ ಮನೆಗೆ ತಲುಪಿದ್ದೇ ಒಂದು ಸಾಹಸ. ಮೂವರು ಮಹಿಳೆಯರು ಸೇರಿದಂತೆ 9 ಜನರಿದ್ದ ಚುನಾವಣಾ ಸಿಬ್ಬಂದಿಯ ತಂಡ ಬುಧವಾರ ಶಿವಲಿಂಗಂ ಮನೆಗೆ ಹೊರಟಿತ್ತು. ಇದಕ್ಕಾಗಿ ಸಿಬ್ಬಂದಿ ಬೆಳಿಗ್ಗೆ ಸುಮಾರು 6 ಗಂಟೆಗೆ ಮುನ್ನಾರ್‌ನಿಂದ ಹೊರಟು ಅಲ್ಲಿಂದ ವಾಹನದಲ್ಲಿ ಪಯಣಿಸಿ ಇರ್ವಿಕುಲಂ ರಾಷ್ಟ್ರೀಯ ಉದ್ಯಾನವನದ ನಡುವೆ ಸಾಗಿ ಇಡಮಲಕ್ಕುಡಿಯ ಪ್ರವೇಶ ದ್ವಾರವಾದ ಪೆಟ್ಟಿಮುಡಿಯಲ್ಲಿರುವ ಕೆಪ್ಪಕಾಡು ಪ್ರದೇಶವನ್ನು ತಲುಪಿದರು.
ಅಲ್ಲಿಂದ ಮತ್ತೆ ನಿಜವಾದ ಸವಾಲು ಆರಂಭವಾಗಿತ್ತು. ಕಡಿದಾದ ನಿರ್ಜನ ರಸ್ತೆಯ ಮೂಲಕ ಅವರು ಮತ್ತೆ 18 ಕಿ. ಮೀ. ಪ್ರಯಾಣ ಬೆಳೆಸಿದರು. ದಟ್ಟ ಅರಣ್ಯದಲ್ಲಿ ಕಾಲ್ನಡಿಗೆ ಮೂಲಕ ಸಾಗಿದ ಅವರು ಶಿವಲಿಂಗಂ ಅವರ ಮನೆಗೆ ತಲುಪುವಾಗ ಗಂಟೆ ಮಧ್ಯಾಹ್ನ 1.15 ಆಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತೆಯೇ ಅಲ್ಲಿಗೆ ತಲುಪಿದಾಗ ಮೊದಲಿಗೆ ಶಿವಲಿಂಗಂ ಅವರನ್ನು ಗುರುತಿಸುವುದು ಕಷ್ಟವಾಗಿತ್ತು. ಯಾಕೆಂದರೆ ಅಲ್ಲಿ ಸುಮಾರು 10 ಮನೆಗಳಿದ್ದವು. ಕೊನೆಗೂ ಶಿವಲಿಂಗಂ ಅವರನ್ನು ಗುರುತಿಸಿದೆವು. ಗುಡಿಸಲಿನಲ್ಲಿ ವಾಸವಾಗಿರುವ ಅವರು ಮಾತನಾಡಲು ಮತ್ತು ಎದ್ದು ನಿಲ್ಲಲೂ ಕಷ್ಟ ಪಡುತ್ತಿದ್ದಾರೆ. ಆದರೂ ಈ ಇಳಿ ವಯಸ್ಸಿನಲ್ಲಿಯೂ ತಮ್ಮ ಕರ್ತವ್ಯವನ್ನು ಮರೆಯದ ಅವರನ್ನು ನೋಡಿ ಹೆಮ್ಮೆ ಎನಿಸಿತು. ಕೊನೆಗೆ ಅವರ ಮನೆಯಲ್ಲೇ ವೋಟಿಂಗ್ ಬೂತ್ ಸಿದ್ಧಪಡಿಸಿ ಅವರ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟೆವು ಎಂದು ಹೇಳಿದರು.
ವೋಟ್ ಫ್ರಮ್ ಹೋಮ್ ಆಯ್ಕೆ ಮಾಡಿ ಕಾದು ಕುಳಿತಿದ್ದ ವೃದ್ಧ
ಈ ಬಾರಿಯ ವೋಟ್ ಫ್ರಮ್ ಹೋಮ್ ಸೌಲಭ್ಯ ಶಿವಲಿಂಗಂ ಅವರ ಕುಟುಂಬದವರ ಗಮನಕ್ಕೆ ಬಂದಿತ್ತು. ಕೂಡಲೇ ಕುಟುಂಬಸ್ಥರು ಸ್ಥಳೀಯ ಬೂತ್ ಅಧಿಕಾರಿಯ ಸಹಾಯದಿಂದ ವೋಟ್ ಫ್ರಮ್ ಹೋಮ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ಚುನಾವಣಾ ಆಯೋಗ ಸಿಬ್ಬಂದಿಯನ್ನು ನೇಮಿಸಿತ್ತು. ಮತ ಚಲಾಯಿಸುವಾಗ ಶಿವಲಿಂಗಂ ಅವರಿಗೆ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.