ಪರಿಷ್ಕೃತ ಪಠ್ಯಪುಸ್ತಕ ಒಂದು ತಿಂಗಳ ಒಳಗಾಗಿ ಶಾಲೆಗಳಿಗೆ ಲಭ್ಯವಾಗುವ ನಿರೀಕ್ಷೆ ಇದೆ.
2024-25ನೇ ಶೈಕ್ಷಣಿಕ ವರ್ಷಕ್ಕಾಗಿ ಶಾಲಾ ಪಠ್ಯಗಳನ್ನು NCERT ಪರಿಷ್ಕರಿಸಿದ್ದು, ಈ ಬಗ್ಗೆ ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿಗೆ ಮಾಹಿತಿ ನೀಡಿದೆ.
ಶಾಲಾ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ NCERTಗೆ ವಾರ್ಷಿಕ ನಾಲ್ಕು ಕೋಟಿಗೂ ಅಧಿಕ ಮಂದಿ ಬಳಸುವ ಪಠ್ಯಪುಸ್ತಕಗಳ ಕರಡು ರಚಿಸುವ ಹೊಣೆ ವಹಿಸಲಾಗಿದೆ.
2006-07ರಿಂದಲೂ ಬಳಕೆಯಲ್ಲಿದ್ದ ಮೂಲ ಪಠ್ಯದಲ್ಲಿದ್ದ 8ನೇ ಅಧ್ಯಾಯ ಅಂದರೆ ಸ್ವಾತಂತ್ರ್ಯದ ಬಳಿಕ ಭಾರತದ ರಾಜಕೀಯ ಎಂಬ ಅಧ್ಯಾಯದಲ್ಲಿ ಭಾರತದ ರಾಜಕೀಯದ ಐದು ಪ್ರಮುಖ ಇತ್ತೀಚಿನ ಬೆಳವಣಿಗೆಗಳು ಎಂಬ ಶೀರ್ಷಿಕೆಯಡಿ ಅಯೋಧ್ಯೆ ಚಳವಳಿಯನ್ನು ಉಲ್ಲೇಖಿಸಲಾಗಿದೆ.
1989ರ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಪತನ, 1990ರ ಮಂಡಲ ಚಳವಳಿ, 1991ರಿಂದ ಆರಂಭವಾದ ಆರ್ಥಿಕ ಸುಧಾರಣೆ ಮತ್ತು 1991ರಲ್ಲಿ ರಾಜೀವ್‍ಗಾಂಧಿಯವರ ಹತ್ಯೆ ಇತರ ನಾಲ್ಕು ಅಂಶಗಳಾಗಿವೆ.
"ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೆ ಅನುಗುಣವಾಗಿ ಮಾಹಿತಿ ಪರಿಷ್ಕರಿಸಲಾಗಿದೆ. ಸುಪ್ರೀಂಕೋರ್ಟ್‍ನ ಸಂವಿಧಾನ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ಮತ್ತು ಅದನ್ನು ವ್ಯಾಪಕವಾಗಿ ಸ್ವಾಗತಿಸಲಾದ ಹಿನ್ನೆಲೆಯಲ್ಲಿ ಅಯೋಧ್ಯೆ ಸಮಸ್ಯೆ ಬಗೆಗಿನ ಮಾಹಿತಿಗಳನ್ನು ಪರಿಷ್ಕರಿಸಲಾಗಿದೆ" ಎಂದು NCERT ವೆಬ್‍ಸೈಟ್‍ನಲ್ಲಿ ತಿಳಿಸಿದೆ.
ರಾಮಜನ್ಮಭೂಮಿ ದೇವಸ್ಥಾನಕ್ಕೆ ಸಂಬಂಧಿಸಿದ ಶತಮಾನಗಳಷ್ಟು ಹಳೆಯ ಕಾನೂನು ಮತ್ತು ರಾಜಕೀಯ ವ್ಯಾಜ್ಯಗಳು ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರಲು ಆರಂಭಿಸಿದ್ದು, ಇದು ಹೊಸ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದೆ. ರಾಮಜನ್ಮಭೂಮಿ ಚಳವಳಿ ಪ್ರಮುಖ ವಿಷಯವಾಗಿದ್ದು, ದೇಶದ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವದ ಚಿತ್ರಣವನ್ನೇ ಬದಲಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಅಯೊಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೊಸ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.