ಲಂಡನ್: ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ಕಳೆದ ವರ್ಷ ನಡೆದ ದಾಳಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಹೇಳಿದೆ.
ಬ್ರಿಟನ್‌ನ ಹೌನ್‌ಸ್ಲೋ ಪ್ರದೇಶದ ನಿವಾಸಿ ಇಂದ್ರಪಾಲ್ ಸಿಂಗ್ ಗಾಬಾ ಬಂಧಿತ ಆರೋಪಿ.
2023ರ ಮಾರ್ಚ್ 22ರಂದು ನಡೆದ ಪ್ರತಿಭಟನೆಯಲ್ಲಿ ಈತ ಪಾಲ್ಗೊಂಡಿದ್ದ.
ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ವಿರುದ್ಧ 2023ರ ಮಾರ್ಚ್ 18ರಂದು ಪಂಜಾಬ್ ಪೊಲೀಸರು ಕೈಗೊಂಡ ಕ್ರಮ ಖಂಡಿಸಿ ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ದಾಳಿ ನಡೆಸಲಾಗಿತ್ತು. ಕಚೇರಿ ಮೇಲಿದ್ದ ಭಾರತ ಧ್ವಜವನ್ನು ಬಲವಂತದಿಂದ ಇಳಿಸಿದ್ದರು. ಆದರೆ ಈ ಘಟನೆಯು ಮುಂದೆ ಭಾರತ ಹೈ ಕಮಿಷನ್ ಹಿಂದೆ ಇದ್ದಿದ್ದಕ್ಕಿಂತಲೂ ದೊಡ್ಡ ಧ್ವಜವನ್ನು ಅಳವಡಿಸಲು ಪ್ರೇರೇಪಿಸಿತ್ತು.
ಧ್ವಜ ಇಳಿಸಿದ ಘಟನೆ ವಿರೋಧಿಸಿ ಬ್ರಿಟನ್‌ನಲ್ಲಿರುವ ಭಾರತೀಯರು ಹೈ ಕಮಿಷನ್ ಬಳಿ ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಂಡನ್ ಮೇಯರ್ ಮತ್ತು ಬ್ರಿಟನ್ ಸರ್ಕಾರವನ್ನು ಆಗ್ರಹಿಸಿದ್ದರು.
'ಈ ಘಟನೆ ಕುರಿತು ತನಿಖೆ ನಡೆಸಿದ್ದು, ಕಳೆದ ವರ್ಷ ಮಾರ್ಚ್ 19 ಹಾಗೂ ಮಾರ್ಚ್ 22ರಂದು ಲಂಡನ್‌ನಲ್ಲಿ ನಡೆದ ಘಟನೆ ಹಾಗೂ ಭಾರತದ ಕಚೇರಿ ಮತ್ತು ಅಲ್ಲಿರುವ ಅಧಿಕಾರಿಗಳ ಮೇಲಿನ ಹಲ್ಲೆಯ ಹಿಂದೆ ದೊಡ್ಡ ಪಿತೂರಿಯನ್ನೇ ನಡೆಸಲಾಗಿತ್ತು' ಎಂದು ಎನ್‌ಐಎ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.