ಕೋಲ್ಕತ್ತಾ: 2022 ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಅಧಿಕಾರಿಗಳ ತಂಡ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ಶನಿವಾರ ಇಬ್ಬರು ಟಿಎಂಸಿ ಕಾರ್ಯಕರ್ತರನ್ನು ಬಂಧಿಸಿದ ನಂತರ ಅವರ ಮೇಲೆ ದಾಳಿ ನಡೆಸಲಾಗಿದೆ.
ಘಟನೆಯಲ್ಲಿ ಇಬ್ಬರು ಎನ್‌ಐಎ ಅಧಿಕಾರಿಗಳಿಗೆ ಗಾಯಗಳಾಗಿದ್ದು, ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಮತ್ತು ಅವರ ವಾಹನವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.
ಎನ್‌ಐಎ ಮತ್ತು ಇತರ ಏಜೆನ್ಸಿಗಳ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯರಾತ್ರಿ ಮತ್ತು ಚುನಾವಣೆಗೆ ಮುನ್ನ ದಾಳಿಗಳನ್ನು ಏಕೆ ನಡೆಸಲಾಯಿತು ಎಂದು ಪ್ರಶ್ನಿಸಿದ್ದಾರೆ.
ಡಿಸೆಂಬರ್ 3, 2022 ರಂದು ಭೂಪತಿನಗರದಲ್ಲಿ ಮನೆಯೊಂದರಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಭೂಪತಿನಗರದ ಇಬ್ಬರು ನಿವಾಸಿಗಳಾದ ಬಲೈ ಮೈತಿ ಮತ್ತು ಮನೋಬ್ರತ ಜಾನಾಗೆ ಸಮನ್ಸ್ ನೀಡಿತ್ತು. ಅವರು ವಿಚಾರಣೆಗೆ ಹಾಜರಾಗದ ಕಾರಣ, ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಎನ್‌ಐಎ ಅಧಿಕಾರಿಗಳು ಜಾನಾ ಮತ್ತು ಮೈತಿಯೊಂದಿಗೆ ವಾಪಸಾಗುತ್ತಿದ್ದಾಗ ಏಕಾಏಕಿ ಅವರ ಮೇಲೆ ದಾಳಿ ನಡೆಸಲಾಯಿತು.
ಏತನ್ಮಧ್ಯೆ, ಬ್ಯಾನರ್ಜಿ ಏಜೆನ್ಸಿ ವಿರುದ್ಧ ವಾಗ್ದಾಳಿ ನಡೆಸಿದರು, "ಎನ್ಐಎಗೆ ಯಾವ ಹಕ್ಕಿದೆ? ಅವರು ಬಿಜೆಪಿಯನ್ನು ಬೆಂಬಲಿಸಲು ಇದೆಲ್ಲವನ್ನೂ ಮಾಡುತ್ತಿದ್ದಾರೆ. ಬಿಜೆಪಿಯ ಕೊಳಕು ರಾಜಕೀಯದ ವಿರುದ್ಧ ಹೋರಾಡಲು ನಾವು ಇಡೀ ಜಗತ್ತಿಗೆ ಕರೆ ನೀಡುತ್ತೇವೆ" ಎಂದು ಹೇಳಿದರು.