ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆ ರದ್ಧತಿಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠದ ಎದುರು ವಕೀಲ ಮ್ಯಾಥ್ಯ್ಸೂ ನೆಡುಂಪಾರಾ ಅವರು ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದರು.
'ಯಾವುದೇ ವಿಚಾರದಲ್ಲಿ ಸಂವಿಧಾನ ಪೀಠವು ತೆಗೆದುಕೊಂಡ ನಿರ್ಧಾರದ ಮೇಲೆ ಮರು ವಿಚಾರಣೆಗೆ ಅವಕಾಶವಿಲ್ಲ ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ. ರಿಜಿಸ್ಟ್ರಾರ್ ಆದೇಶದ ವಿರುದ್ಧ ಇನ್ನಷ್ಟು ಮಾರ್ಗೋಪಾಯಗಳಿವೆ' ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
'ಕೊಲಿಜಿಯಂ ವ್ಯವಸ್ಥೆ ರದ್ದಾಗಬೇಕು. ಸಂಸ್ಥೆಯ ಬಗ್ಗೆ ಇರುವ ವಿಶ್ವಾಸಾರ್ಹತೆ ಉಳಿಯಬೇಕು' ಎಂದು ಅರ್ಜಿದಾರ ವಕೀಲ ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, 'ಕ್ಷಮಿಸಿ' ಎಂದಷ್ಟೇ ಸಂಕ್ಷಿಪ್ತವಾಗಿ ಹೇಳಿದರು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕದಲ್ಲಿ ರಾಜಕಾರಣಿಗಳು ಹಾಗೂ ನಾಗರಿಕರು ತಮ್ಮ ಅಂತಿಮ ಅಭಿಪ್ರಾಯ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯ್ದೆ ಮತ್ತು 99ನೇ ಸಂವಿಧಾನ ತಿದ್ದುಪಡಿ ಕುರಿತಂತೆ 2015ರ ಅ. 17ರಂದು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವು ಅಸಾಂವಿಧಾನಿಕ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.
ಈ ತೀರ್ಪು ಕುರಿತು ಪುನರ್ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕೊಲಿಜಿಯಂ ವ್ಯವಸ್ಥೆ ತೆಗೆದುಹಾಕಿ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಜಾರಿಗೆ ತರುವ ಮಸೂದೆಯನ್ನು ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಮಂಡಿಸಲು ಮುಂದಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿದ್ದವರಲ್ಲಿ ಕೆಲ ನ್ಯಾಯಮೂರ್ತಿಗಳನ್ನೊಳಗೊಂಡ ಗುಂಪು ವಿರೋಧಿಸಿತು.
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದಲ್ಲಿ ಒಟ್ಟು ಆರು ಸದಸ್ಯರು ಇರುತ್ತಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಮಂತ್ರಿ ಮತ್ತು ಇಬ್ಬರು ಗಣ್ಯ ವ್ಯಕ್ತಿಗಳು ಇರುತ್ತಾರೆ ಎಂದು ಹೇಳಲಾಗಿತ್ತು.