ಜೈಪುರ: ಜನರ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿ ವಿವಾದಕ್ಕೆ ಕಾರಣರಾಗಿರುವ ಪ್ರಧಾನಿ ಮೋದಿ ಮಂಗಳವಾರವೂ ವಾಗ್ದಾಳಿ ಮುಂದುವರೆಸಿದರು. ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿಸ್ತರಿಸಲು ಮತ್ತು ಅದನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸಿದೆ ಎಂದು ಆರೋಪ ಮಾಡಿದರು.
ಟೊಂಕ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, '2004ರಲ್ಲಿ ಕಾಂಗ್ರೆಸ್, ಕೇಂದ್ರದಲ್ಲಿ ಸರ್ಕಾರ ರಚಿಸಿದ ನಂತರ ಅದು ಮಾಡಿದ ಮೊದಲ ಕೆಲಸ ಎಂದರೆ, ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ, ಅದನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸಿದ್ದು. ಅದು ಪ್ರಾಯೋಗಿಕ ಯೋಜನೆಯಾಗಿದ್ದು, ದೇಶದಾದ್ಯಂತ ಜಾರಿ ಮಾಡಲು ಪಕ್ಷ ಯೋಜಿಸಿತ್ತು. 2004 ಮತ್ತು 2010ರ ನಡುವೆ ಆಂಧ್ರದಲ್ಲಿ ಮುಸ್ಲಿಂ ಮೀಸಲಾತಿ ಜಾರಿಗೊಳಿಸಲು ಕಾಂಗ್ರೆಸ್ ನಾಲ್ಕು ಬಾರಿ ಪ್ರಯತ್ನಿಸಿತು. ಆದರೆ, ಕಾನೂನು ತೊಡಕಿನಿಂದ ಮತ್ತು ಸುಪ್ರೀಂ ಕೋರ್ಟ್‌ನಿಂದ ಅದರ ಉದ್ದೇಶ ಈಡೇರಲಿಲ್ಲ' ಎಂದು ಹೇಳಿದರು.
'2011ರಲ್ಲಿ ಕಾಂಗ್ರೆಸ್ ಅದನ್ನು ದೇಶದಾದ್ಯಂತ ಜಾರಿಗೆ ತರಲು ಪ್ರಯತ್ನಿಸಿತು. ಎಸ್‌ಸಿ, ಎಸ್‌ಟಿ, ಒಬಿಸಿ ಹಕ್ಕುಗಳನ್ನು ಕಸಿದುಕೊಂಡು ಮತಬ್ಯಾಂಕ್ ರಾಜಕಾರಣಕ್ಕಾಗಿ ಅವುಗಳನ್ನು ಬೇರೆಯವರಿಗೆ ನೀಡಲು ಯೋಜಿಸಿತ್ತು. ಕಾಂಗ್ರೆಸ್ ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರನ್ನು ಲೆಕ್ಕಿಸದೇ ಪ್ರಜ್ಞಾಪೂರ್ವಕವಾಗಿಯೇ ಅದನ್ನು ಮಾಡಿತ್ತು' ಎಂದು ಆರೋಪಿಸಿದರು.
'ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ಅವಕಾಶ ಸಿಕ್ಕಾಗ ಅದು ಮಾಡಿದ ಮೊದಲ ಕೆಲಸ ಎಂದರೆ, ಎಸ್‌ಸಿ, ಎಸ್‌ಟಿಯಿಂದ ಕಸಿದುಕೊಂಡಿದ್ದ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದು' ಎಂದು ಹೇಳಿದರು.
ನರೇಂದ್ರ ಮೋದಿ, ಪ್ರಧಾನಿ ದಲಿತರು ಮತ್ತು ಆದಿವಾಸಿಗಳಿಗೆ ನೀಡಲಾಗಿರುವ ಮೀಸಲಾತಿಯ ಸಾಂವಿಧಾನಿಕ ಮಿತಿ 2020ಕ್ಕೆ ಅಂತ್ಯಗೊಂಡಿದ್ದು ಅದನ್ನು ನಾನು 10 ವರ್ಷ ವಿಸ್ತರಿಸಿದ್ದೇನೆ.'ಮೋದಿ ನಿಮಗೆ ಗ್ಯಾರಂಟಿ ನೀಡುತ್ತಾರೆ... ದಲಿತರು, ಹಿಂದುಳಿದವರು, ಆದಿವಾಸಿಗಳ ಮೀಸಲಾತಿ ಕೊನೆಗೊಳ್ಳುವುದಿಲ್ಲ ಮತ್ತು ಧರ್ಮದ ಆಧಾರದಲ್ಲಿ ಅದನ್ನು ವಿಭಜಿಸಲು ಬಿಡುವುದಿಲ್ಲ' ಎಂದು ತಿಳಿಸಿದರು.
'ಕಾಂಗ್ರೆಸ್ ಏಕೆ ಸತ್ಯ ಮುಚ್ಚಿಡುತ್ತಿದೆ' ಎಂದು ಪ್ರಶ್ನಿಸಿದ ಅವರು, 'ನೀವು ನಿಯಮ ಮಾಡಿದಿರಿ, ನಿರ್ಧಾರ ತೆಗೆದುಕೊಂಡಿರಿ. ಮೋದಿ ನಿಮ್ಮ ಗುಟ್ಟನ್ನು ಬಹಿರಂಗಪಡಿಸಿ, ಗುಪ್ತ ಕಾರ್ಯಸೂಚಿ ಹೊರಬಂದ ನಂತರ, ನೀವು ಕಂಪಿಸುತ್ತಿದ್ದೀರಿ' ಎಂದು ಹೇಳಿದರು.
ಕಾಂಗ್ರೆಸ್ ಜನರ ಆಸ್ತಿ ಕಸಿದುಕೊಂಡು ಅದನ್ನು 'ಆಯ್ದ ಜನರಿಗೆ' ನೀಡಲು 'ಆಳವಾದ ಕುತಂತ್ರ' ಹೆಣೆದಿದೆ ಎಂದು ಪ್ರಧಾನಿ ಮೋದಿ ತಮ್ಮ ಆರೋಪವನ್ನು ಪುನರುಚ್ಚರಿಸಿದರು.
'ಸಂಪತ್ತಿನ ಎಕ್ಸ್‌ರೇ ಮಾಡುವುದಾಗಿ ಅವರ ನಾಯಕ ತಿಳಿಸಿದ್ದಾರೆ. ಅದರರ್ಥ, ಪೆಟ್ಟಿಗೆಯಲ್ಲಿ ಅಥವಾ ಗೋಡೆಯಲ್ಲಿ ಏನನ್ನಾದರೂ ಬಚ್ಚಿಟ್ಟಿದ್ದರೆ, ಅದನ್ನು ಎಕ್ಸ್‌ರೇ ಮೂಲಕ ಪರಿಶೀಲನೆ ಮಾಡಲಾಗುವುದು. ನಂತರ ಅವರು ನಿಮ್ಮ ಎಲ್ಲ ಸಂಪತ್ತನ್ನು ವಶಕ್ಕೆ ಪಡೆಯುತ್ತಾರೆ ಮತ್ತು ಅದನ್ನು ಜನರಿಗೆ ಹಂಚುತ್ತಾರೆ' ಎಂದು ತಿಳಿಸಿದರು.
'ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ಎಸೆದಿದ್ದವರಿಗೆ ರಕ್ಷಣೆ ನೀಡಿ, ಅಂಥ ಮೆರವಣಿಗೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಬಿಜೆಪಿ ಆಡಳಿತದಲ್ಲಿ ಯಾರಿಗೂ ಅಂಥ ಆಚರಣೆಗಳನ್ನು ಪ್ರಶ್ನಿಸುವ ಧೈರ್ಯವಿಲ್ಲ' ಎಂದು ಹೇಳಿದರು.
'ಮೋದಿ ಸಂವಿಧಾನಕ್ಕೆ ಬದ್ಧರಾಗಿರುವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆರಾಧಿಸುವ ವ್ಯಕ್ತಿ' ಎಂದು ಹೇಳಿದರು.
'ಹನುಮಾನ್ ಚಾಲೀಸಾ ಪಠಿಸುವುದು ಅಪರಾಧ'
ಹನುಮಾನ್ ಜಯಂತಿಯ ದಿನ ಅದರ ಆಧಾರದ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 'ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಪಠಿಸುವುದು ಕೂಡ ಅಪರಾಧವಾಗಿದೆ. ಅವರ ಆಡಳಿತದಲ್ಲಿ ಜನ ತಮ್ಮ ಆಚರಣೆಗಳನ್ನು ಪಾಲಿಸುವುದು ಕೂಡ ಕಷ್ಟವಾಗಿದೆ' ಎಂದು ಆರೋಪಿಸಿದರು. ತಮ್ಮ ಆರೋಪಕ್ಕೆ ಪೂರಕವಾಗಿ ಅವರು ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದರು.
ಮಾತುಗಳಲ್ಲೇ ಫಲಿತಾಂಶದ ಬಿಂಬ- ಅಖಿಲೇಶ್
ಅಲಿಗಢ: ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳು ಚುನಾವಣಾ ಫಲಿತಾಂಶ ಏನಾಗಬಹುದು ಎನ್ನುವುದರ ಪ್ರತಿಬಿಂಬದಂತೆ ಕಾಣುತ್ತಿವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಲೀಗಢ ಮತ್ತು ಹತ್ರಾಸ್ ಲೋಕಸಭಾ ಕ್ಷೇತ್ರಗಳ 'ಇಂಡಿಯಾ' ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ರ‍್ಯಾಲಿಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು 'ಚುನಾವಣೆಯ ದಿಕ್ಕು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ ನೀವು ದೆಹಲಿ ಜನರ (ಪ್ರಧಾನಿ) ಮತ್ತು ಲಖನೌ ಜನರ (ಉತ್ತರಪ್ರದೇಶ ಮುಖ್ಯಮಂತ್ರಿ) ಭಾಷಣಗಳನ್ನು ಕೇಳಲೇಬೇಕು. ಚುನಾವಣೆ ಬಳಿಕ ಅಧಿಕಾರದಿಂದ ಕೆಳಗೆ ಇಳಿಯಲಿರುವವರ ಮಾತುಗಳು ಚುನಾವಣಾ ಫಲಿತಾಂಶ ವ್ಯಕ್ತವಾಗುತ್ತಿದೆ' ಎಂದು ಹೇಳಿದರು.
'ದೇಶದಾದ್ಯಂತ ನಡೆದ ಮೊದಲ ಹಂತದ ಮತದಾನದ ವೇಳೆ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ. ಇದೀಗ ಸಂವಿಧಾನದ ಕುರಿತು ಮಾತನಾಡುವ ಕಾಲ ಬಂದಿದೆ ಎಂಬುದನ್ನು ಅವರಿಗೆ (ಬಿಜೆಪಿಗೆ) ಮತ್ತೆ ಹೇಳಲು ಬಯಸುತ್ತೇವೆ' ಎಂದು ಹೇಳಿದರು.