ನವದೆಹಲಿ: ಕಾಂಗ್ರೆಸ್ ಪಕ್ಷ ನಕಲಿ ಶಾರುಖ್ ಖಾನ್ ರನ್ನು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಮತದಾರರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.
. ಮಹಾರಾಷ್ಟ್ರದ ಸೋಲಾಪುರದಲ್ಲಿ (Lok Sabha Election) ಕಾಂಗ್ರೆಸ್ ಅಭ್ಯರ್ಥಿ ಪ್ರಣೀತಿ ಶಿಂಧೆ ಪರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಪ್ರಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾರುಖ್ ಖಾನ್ ರೀತಿ ಕಾಣುವ ವ್ಯಕ್ತಿ ಪ್ರಚಾರದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದ ‘ಹಗರಣ’ ಎಂದು ಕರೆದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ ಪ್ರಚಾರದ ಬಗ್ಗೆ ಕೆಲವು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ “ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಯಿಲ್ಲದೆ ಮತ್ತು ಬಹಿರಂಗವಾಗಿ ಮೂರ್ಖರನ್ನಾಗಿಸಲು ಮುಂದಾಗಿದೆ.. ನಕಲಿ ಸಮೀಕ್ಷೆಗಳನ್ನು ಹರಡುವುದು, ಭಾರತ ವಿರೋಧಿ ನಿರೂಪಣೆಗಳನ್ನು ರಚಿಸುವುದು, ಎಐ ಬಳಸಿ ಸೆಲೆಬ್ರಿಟಿಗಳ ಡೀಪ್ ಫೇಕ್ಗಳನ್ನು ನಿರ್ಮಿಸುತ್ತದೆ. ಈ ಪಕ್ಷವು ಈಗಾಗಲೇ ಇವಿಎಂಗಳನ್ನು ದೂಷಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಾರುಖ್ ಅವರ ತದ್ರೂಪಿ ಖಾದರ್ ಪೋನಿಟೈಲ್ ಹೊಂದಿದ್ದಾರೆ. ಜನರತ್ತ ಕೈ ಬೀಸುತ್ತಾ ತೆರೆದ ವಾಹನದಲ್ಲಿ ಸಾಗಿದ್ದಾರೆ. ಆವಾಹನದಲ್ಲಿ ರಾಹುಲ್ ಗಾಂಧಿ, ಪ್ರಣೀತಿ ಶಿಂಧೆ ಅವರ ಭಾವಚಿತ್ರವಿರುವ ಕಾಂಗ್ರೆಸ್ ಬ್ಯಾನರ್ ಇತ್ತು.
ಯಾರು ಈ ನಕಲಿ ಶಾರುಖ್ ಖಾನ್?
ಮೂಲಗಳ ಪ್ರಕಾರ ಇದು ಶಾರುಖ್ ಖಾನ್ ಅವರ ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ಎಂದು ಹೇಳಲಾಗಿದೆ. ನಟ ಶಾರುಖ್ ಖಾನ್ ಅಭಿಮಾನಿಯಾಗಿರುವ ಇಬ್ರಾಹಿಂ ಖಾದ್ರಿ ಅವರಂತೆಯೇ ವೇಷಭೂಷಣ ಧರಿಸಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಈ ಪ್ರದೇಶದಲ್ಲಿ ಇಬ್ರಾಹಿಂ ಖಾದ್ರಿ ಶಾರುಖ್ ಖಾನ್ ಅವರ ತದ್ರೂಪಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದು, ಖಾದ್ರಿ ಶಾರುಖ್ ಅವರಂತೆಯೇ ಮಾತನಾಡುವ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಶಾರುಖ್ ಅವರ ಸಿಗ್ನೇಚರ್ ಸ್ಟೈಲ್ಗಳನ್ನು ಇಬ್ರಾಹಿಂ ನಕಲು ಮಾಡಿದ್ದು, ಅವರ ನೃತ್ಯ ಚಲನೆಗಳನ್ನೂ ಅನುಕರಣೆ ಮಾಡುತ್ತಾರೆ.
ಈ ಹಿಂದೆ ಶಾರುಖ್ ಖಾನ್ ಅವರ ರಯೀಸ್ ಸಿನಿಮಾ ಬಿಡುಗಡೆಯಾದಾಗ ಗುಜರಾತ್ ಮೂಲದ ಇಬ್ರಾಹಿಂ ಖಾದ್ರಿ ಖ್ಯಾತಿ ಪಡೆದುಕೊಂಡಿದ್ದರು. ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಇಬ್ರಾಹಿಂ ಖಾದ್ರಿ ಅವರು ಶಾರುಖ್ ಖಾನ್ ರೀತಿ ಫೋಟೋಗೆ ಪೋಸ್ ಕೂಡ ನೀಡಿದ್ದರು.