HEALTH TIPS

UPSC Results 2023 : ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು

 ವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾನ್ಪುರದ ಐಐಟಿಯಲ್ಲಿ ಅಧ್ಯಯನ ಮಾಡಿರುವ ಆದಿತ್ಯ ಶ್ರೀವಾಸ್ತವ ಅಗ್ರಸ್ಥಾನ ಪಡೆದಿದ್ದಾರೆ. ಅನಿಮೇಶ್‌ ಪ್ರಧಾನ್‌ ಮತ್ತು ಡೋಣೂರು ಅನನ್ಯಾ ರೆಡ್ಡಿ ಕ್ರಮವಾಗಿ ಎರಡು ಮತ್ತು ಮೂರನೇ ರ್‍ಯಾಂಕ್‌ ಗಳಿಸಿದ್ದಾರೆ.

ಒಟ್ಟು 1,016 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ 664 ಪುರುಷರು ಮತ್ತು 352 ಮಹಿಳೆಯರು. ಇವರನ್ನು ವಿವಿಧ ಸೇವೆಗಳಿಗೆ ಆಯೋಗ ಶಿಫಾರಸು ಮಾಡಿದೆ. ಅರ್ಹತೆ ಪಡೆದಿರುವ ಅಗ್ರ 25 ಮಂದಿಯಲ್ಲಿ 10 ಮಹಿಳೆಯರಾಗಿದ್ದರೆ, 15 ಪುರುಷರು.

ಆಯ್ಕೆಯಾಗಿರುವ 1,016 ಅಭ್ಯರ್ಥಿಗಳ ಪೈಕಿ 347 ಮಂದಿ ಸಾಮಾನ್ಯ ವರ್ಗದವರು, 115 ಜನ ಆರ್ಥಿಕವಾಗಿ ದುರ್ಬಲ ವರ್ಗದವರು, 303 ಇತರ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿಗೆ ಸೇರಿದ 165 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 86 ಮಂದಿ ಇದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.

ಆ ಪೈಕಿ 180 ಅರ್ಹರಿಗೆ ಐಎಎಸ್‌, 37 ಮಂದಿಗೆ ಐಎಫ್‌ಎಸ್‌ ಮತ್ತು 200 ಅಭ್ಯರ್ಥಿಗಳಿಗೆ ಐಪಿಎಸ್‌ ಸಿಗಲಿದೆ. ಉಳಿದಂತೆ ಕೇಂದ್ರೀಯ ಗ್ರೂಪ್‌ 'ಎ' ಸೇವೆಗಳಿಗೆ ಸೇರಿದ 613, ಗ್ರೂಪ್‌ 'ಬಿ' ಸೇವೆಗಳಿಗೆ ಸೇರಿದ 113 ಹುದ್ದೆಗಳು ದೊರೆಯಲಿವೆ. 240 ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.

ಬಿ.ಟೆಕ್‌ ಪದವೀಧರನಿಗೆ ಅಗ್ರಸ್ಥಾನ:

ಅಗ್ರಸ್ಥಾನ ಪಡೆದಿರುವ ಶ್ರೀವಾಸ್ತವ ಅವರು ಕಾನ್ಪುರದ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯಿಂಗ್‌ನಲ್ಲಿ ಬಿ.ಟೆಕ್‌ ಪದವೀಧರರು. ಅವರು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಅನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

ರೂರ್ಕೆಲಾದ ಎನ್‌ಐಟಿಯಲ್ಲಿ ಕಂಫ್ಯೂಟರ್‌ ಸೈನ್ಸ್‌ ಪದವೀಧರರಾದ ಅನಿಮೇಶ್‌ ಪ್ರಧಾನ್ ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ಡೋಣೂರು ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾನಿಲಯದ ಮಿರಾಂಡಾ ಹೌಸ್‌ನಲ್ಲಿ ಭೂಗೋಳಶಾಸ್ತ್ರ ಬಿ.ಎ (ಆನರ್ಸ್) ಪದವಿ ಪಡೆದಿದ್ದಾರೆ. ಅವರು ಮಾನವಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು.

ಅಗ್ರ ಐವರಲ್ಲಿ ಇಬ್ಬರು ಮಹಿಳೆಯರು:

ಅಂತಿಮವಾಗಿ ಅರ್ಹತೆ ಪಡೆದಿರುವ ಅಗ್ರ ಐವರಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರಾಗಿದ್ದಾರೆ. ಪಿ.ಕೆ.ಸಿದ್ಧಾರ್ಥ್‌ ರಾಮ್‌ಕುಮಾರ್‌ ಮತ್ತು ರುಹಾನಿ ಕ್ರಮವಾಗಿ ನಾಲ್ಕು ಮತ್ತು ಐದನೇ ರ್‍ಯಾಂಕ್‌ ಪಡೆದಿದ್ದಾರೆ.

ಸಿದ್ಧಾರ್ಥ್‌ ಅವರು ತಿರುವನಂತಪುರದ ಆರ್ಕಿಟೆಕ್ಟರ್‌ ಕಾಲೇಜಿನಲ್ಲಿ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಟರ್‌ ಪದವಿ ಪಡೆದಿದ್ದಾರೆ. ಅವರು ಮಾನವಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು. ದೆಹಲಿ ವಿಶ್ವವಿದ್ಯಾಲಯದ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎ (ಆನರ್ಸ್‌) ಪದವಿ ಪಡೆದಿರುವ ರುಹಾನಿ ಅವರು ಅರ್ಥಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು.

ಅರ್ಹತೆ ಪಡೆದಿರುವ ಅಗ್ರ 25 ಮಂದಿಯಲ್ಲಿ ಬಹುತೇಕರು ಎಂಜಿನಿಯರಿಂಗ್‌, ಮಾನವಿಕಶಾಸ್ತ್ರ, ವಿಜ್ಞಾನ, ವಾಣಿಜ್ಯ, ವ್ಯವಹಾರ ಆಡಳಿತ, ವಾಸ್ತುಶಿಲ್ಪ, ಕಾನೂನು ವಿಷಯಗಳಲ್ಲಿ ಪದವೀಧರರು. ಕೆಲವರು ಐಐಟಿ, ಐಐಎಂ, ಎನ್‌ಐಟಿ, ದೆಹಲಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿದ್ದಾರೆ.

ಅವರು ಐಚ್ಛಿಕ ವಿಷಯವಾಗಿ ಮಾನವಶಾಸ್ತ್ರ, ರಸಾಯನ ವಿಜ್ಞಾನ, ಭೂಗೋಳ, ಅರ್ಥಶಾಸ್ತ್ರ, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್, ಕಾನೂನು, ಇತಿಹಾಸ, ಗಣಿತ, ಭೌತವಿಜ್ಞಾನ, ರಾಜ್ಯಶಾಸ್ತ್ರ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಸಮಾಜಶಾಸ್ತ್ರದಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.

ಅರ್ಹರಲ್ಲಿ 30 ಮಂದಿ ಅಂಗವಿಕಲರು:

ಆಯ್ಕೆಯಾದವರಲ್ಲಿ 30 ಮಂದಿ ಅಂಗವಿಕಲ ಅಭ್ಯರ್ಥಿಗಳು. ಅವರಲ್ಲಿ 16 ಜನರು ಮೂಳೆ ಸಂಬಂಧಿತ ಅಂಗವಿಕಲರು, ಆರು ಮಂದಿ ದೃಷ್ಟಿ ದೋಷವುಳ್ಳವರು, ಐವರು ಶ್ರವಣದೋಷವುಳ್ಳವರು ಮತ್ತು ಮೂವರು ಬಹು ಅಂಗವಿಕಲತೆ ಹೊಂದಿರುವವರಾಗಿದ್ದಾರೆ.

ಯುಪಿಎಸ್‌ಸಿ 2023ರ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಯನ್ನು ಕಳೆದ ವರ್ಷ ಮೇ 28ರಂದು ನಡೆಸಿತ್ತು. ಒಟ್ಟು 10,16,850 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 5,92,141 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 2023ರ ಸೆಪ್ಟೆಂಬರ್‌ನಲ್ಲಿನ ಮುಖ್ಯ ಪರೀಕ್ಷೆಗೆ 14,624 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಈ ಪೈಕಿ 2,855 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದರು ಎಂದು ಆಯೋಗ ಮಾಹಿತಿ ನೀಡಿದೆ.

ಯುಪಿಎಸ್‌ಸಿ ಫಲಿತಾಂಶವು https:// www.upsc.gov.in ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳ ಅಂಕಗಳನ್ನು 15 ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries