ಚುರಚಂದಪುರ: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ್ದ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಚುರಚಂದಪುರಕ್ಕೆ ತೆರಳುವ ಮಾರ್ಗದಲ್ಲಿ 'ನೀವು ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ' ಎಂಬ ಬರಹವಿರುವ ಡ್ರಾಪ್ ಬಾಕ್ಸ್‌ಗಳನ್ನು ಇಡಲಾಗಿದೆ.
ಗಲಭೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಚುನಾವಣೆಯ ಕಾವು, ರ್‍ಯಾಲಿಗಳು, ಪೋಸ್ಟರ್‌ಗಳು ಯಾವುದೊಂದೂ ಕಾಣುತ್ತಿಲ್ಲ.
ಮಣಿಪುರದ ಗಲಭೆ ವೇಳೆ ಭದ್ರತಾ ಪಡೆಗಳಿಂದ ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಸಂದೇಶ ಬರೆದಿರುವ ಡ್ರಾಪ್ ಬಾಕ್ಸ್‌ಗಳನ್ನು ರಾಜ್ಯದ ಹಲವೆಡೆ ಇಡಲಾಗಿದೆ.
ಮೂಲಗಳ ಪ್ರಕಾರ, ಸರ್ಕಾರಿ ಶಸ್ತ್ರಾಗಾರದಿಂದ ಗಲಭೆಕೋರರು 4,200ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದು, ಅವು ಇನ್ನೂ ಪತ್ತೆಯಾಗಿಲ್ಲ.
ಜನಾಂಗೀಯ ಹಿಂಸಾಚಾರ ನಡೆದ ಮಣಿಪುರದಲ್ಲಿ ದುಷ್ಕರ್ಮಿಗಳು ಕದ್ದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಶಸ್ತ್ರಾಸ್ತ್ರ ಹಿಂದಿರುಗಿಸುವಂತೆ ಸೂಚನೆ, ಅಲ್ಲಲ್ಲಿ ಡ್ರಾಪ್ ಬಾಕ್ಸ್‌ಗಳನ್ನು ಇಡುವುದು ಮತ್ತು ಭದ್ರಾತಾ ಪಡೆಗಳಿಂದ ಕೂಂಬಿಂಗ್ ಆಪರೇಶನ್ ಸಹ ನಡೆಸಲಾಗಿದೆ.
ಒಟ್ಟಾರೆ ಕಳುವಾಗಿದ್ದ ಸುಮಾರು 6,000 ಶಸ್ತ್ರಾಸ್ತ್ರಗಳ ಪೈಕಿ 1,800 ಅನ್ನು ಮಾತ್ರ ಈವರೆಗೆ ಹಿಂದಿರುಗಿಸಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಈಗಲೂ ಗಲಭೆಕೋರರ ವಶದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿವಿಧಿ ಸಮುದಾಯಗಳ ಮುಖಂಡರು, ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೂರ್ವಇಂಫಾಲ್‌ನ ಬಿಜೆಪಿ ಶಾಸಕರ ಮನೆ ಬಳಿಯೂ ಒಂದು ಡ್ರಾಪ್ ಬಾಕ್ಸ್ ಇಡಲಾಗಿದೆ.
ವೆಪನ್ ಡ್ರಾಪ್ ಬಾಕ್ಸ್‌ನಲ್ಲಿರುವ ಪೋಸ್ಟರ್‌ನಲ್ಲಿ 'ದಯವಿಟ್ಟು ನೀವು ಕಸಿದುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ' ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆಯಲಾಗಿದೆ. ಯಾವುದೇ ಆತಂಕವಿಲ್ಲದೆ ಈ ಕಾರ್ಯವನ್ನು ಮಾಡಿ ಎಂದು ಟ್ಯಾಗ್‌ಲೈನ್ ನೀಡುವ ಮೂಲಕ ಶಸ್ತ್ರಾಸ್ತ್ರ ಕದ್ದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹಾಕುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.
ಇಂಫಾಲ್ ಕಣಿವೆ ಮತ್ತು ಚುರಚಂದಪುರಕ್ಕೆ ಪಿಟಿಐ ವರದಿಗಾರರು ಭೇಟಿದಾಗ 3 ಪ್ರದೇಶಗಳಲ್ಲಿ ಈ ರೀತಿಯ ಡ್ರಾಪ್ ಬಾಕ್ಸ್‌ಗಳನ್ನು ಗುರುತಿಸಿದ್ದಾರೆ. ಕೆಲವು ಬಾಕ್ಸ್‌ಗಳ ಮೇಲೆ ಗನ್ ಚಿತ್ರಗಳಿದ್ದರೆ, ಮತ್ತೆ ಕೆಲವೆಡೆ ಖಾಲಿ ಇದೆ. ಕೆಲವೆಡೆ ಹಳ್ಳಿಗಳಲ್ಲಿ ಸ್ವಯಂಪ್ರೇರಿತರಾಗಿ ಕೆಲವರು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸುತ್ತಿರುವುದೂ ಕಂಡುಬಂದಿದೆ.
ಚುನಾವಣೆಗೂ ಮುನ್ನ, ಪರವಾನಗಿ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಎರಡು ಲೋಕಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.